ಯಕ್ಷಧ್ರುವ ಪಟ್ಲ ಪೌಂಡೇಶನ್ ದಶಮಾನೋತ್ಸವ ಸಂಭ್ರಮ: ಸಮಲೋಚನಾ ಸಭೆಯಲ್ಲೇ 1 ಕೋಟಿ ರೂ. ದೇಣಿಗೆ ಘೋಷಿಸಿದ ಶಶಿಧರ ಶೆಟ್ಟಿ ಬರೋಡ: ಶಿರಬಾಗಿ ಕೃತಜ್ಞತೆ ಸಲ್ಲಿಸಿದ ಪಟ್ಲ ಸತೀಶ್ ಶೆಟ್ಟಿ:

 

 

 

ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ 10ನೇ ವರ್ಷದ ಪಟ್ಲ ಸಂಭ್ರಮ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಜರಗಿಸುವ ಕುರಿತಾಗಿ ಫೌಂಡೇಷನಿನ ಮಹಾದಾನಿಗಳ, ಮಹಾಪೋಷಕರ , ಟ್ರಸ್ಟಿಗಳ, ವಿವಿಧ ಪ್ರಾದೇಶಿಕ ಘಟಕಗಳ ಪದಾಧಿಕಾರಿಗಳ ಹಾಗೂ ಪಟ್ಲ ಅಭಿಮಾನಿಗಳ ಸಮಲೋಚನಾ ಸಭೆಯು ನಗರದ ಪ್ರತಿಷ್ಠಿತ ಗೋಲ್ಡ್ ಪಿಂಚ್ ಹೋಟೆಲ್ ಸಭಾಂಗಣದಲ್ಲಿ ಜರಗಿತು.

ಕರಾವಳಿಯ ಯಕ್ಷಗಾನ ಕಲೆಯನ್ನು ಪ್ರಸ್ತುತ ಕಾಲಘಟ್ಟದಲ್ಲಿ ಇನ್ನಷ್ಟು ಎತ್ತರಕ್ಕೆ ಪಸರಿಸುತ್ತಿರುವ ಹಾಗೂ ತನ್ಮೂಲಕ ಯಕ್ಷಗಾನದ ಕಲಾವಿದರಿಗಲ್ಲದೆ ಇತರೇ ವಿವಿಧ ಪ್ರಕಾರದ ಅಶಕ್ತರ ಬಾಳಿಗೆ ಬೆಳಕಾಗಿ ಮೂಡಿಬಂದ ಯಕ್ಷಧ್ರುವ ದಶಮಾನೋತ್ಸವ ಸಂಭ್ರಮ ಕಾರ್ಯಕ್ರಮವು 2025ರ ಜೂನ್ 1ರಂದು ಅಡ್ಯಾರ್ ಗಾರ್ಡನ್ ಇಲ್ಲಿ ಜರಗಲಿದ್ದು, ದಶಮಾನೋತ್ಸವ ಸಂಭ್ರಮಕ್ಕೆ ರಚಿಸಲಾಗುವ ಸಮಿತಿಗೆ ಗೌರವಾಧ್ಯಕ್ಷರಾಗಿ ಕೊಡುಗೈದಾನಿ, ಫೌಂಡೇಶನಿನ ಮಹಾದಾನಿ ಡಾ. ಕೆ ಪ್ರಕಾಶ್ ಶೆಟ್ಟಿ (MRG Group) ಹಾಗೂ ಅಧ್ಯಕ್ಷರಾಗಿ ಶಶಿಧರ ಶೆಟ್ಟಿ ಬರೋಡ ಇವರುಗಳ ಹೆಸರನ್ನು ಘೋಷಣೆ ಮಾಡಲಾಯಿತು.

ಸಭೆಯ ವೇದಿಕೆಯಲ್ಲಿ ಟ್ರಸ್ಟಿನ ಗೌರವಾಧ್ಯಕ್ಷರು /ಮಹಾದಾನಿಗಳಾದ ಕನ್ಯಾನ ಸದಾಶಿವ ಶೆಟ್ಟಿ, ಡಾ. ಕೆ ಪ್ರಕಾಶ್ ಶೆಟ್ಟಿ (MRG Group) ,ಟ್ರಸ್ಟಿನ ಸಂಚಾಲಕರಾದ ಐಕಳ ಹರೀಶ್ ಶೆಟ್ಟಿ, ಮಹಾ ಪೋಷಕರಾದ ಕೆ. ಎಂ. ಶೆಟ್ಟಿ, ತೋನ್ಸೆ ಆನಂದ ಶೆಟ್ಟಿ, ಅಶೋಕ್ ಶೆಟ್ಟಿ ಬೆಳ್ಳಾಡಿ, ಸಂತೋಷ್ ಶೆಟ್ಟಿ ಪೂನಾ, ಕರ್ನಿರೆ ವಿಶ್ವನಾಥ ಶೆಟ್ಟಿ, ಸವಣೂರು ಸೀತಾರಾಮ ರೈಯವರು ಉಪಸ್ಥಿತರಿದ್ದು ದಶಮಾನೋತ್ಸವ ಸಂಭ್ರಮವು ಸಮಾಜಕ್ಕೆ ಮಾದರಿಯಾಗುವಂತಹ ಕಾರ್ಯಕ್ರಮವಾಗಲಿ, ಕಾರ್ಯಕ್ರಮದ ಯಶಸ್ಸಿಗೆ ಗರಿಷ್ಠ ಮೊತ್ತದ ದೇಣಿಯನ್ನು ನೀಡಿ ಸಹಕರಿಸಲಾಗುವುದೆಂದು ತಿಳಿಸಿದರು.

ಯಕ್ಷಧ್ರುವ ಪಟ್ಲ ಫೌಂಡೇಶನಿನ ಮಹಾದಾನಿಗಳಾದ ಶಶಿಧರ ಶೆಟ್ಟಿ ಬರೋಡ ದಶಮಾನೋತ್ಸವ ಕಾರ್ಯಕ್ರಮದ ಮೂಲಕ ನಮ್ಮ ಪಟ್ಲ ಫೌಂಡೇಶನ್ನು ಸುಭಧ್ರಗೊಳಿಸುವ ಮತ್ತು ಅದರ ಮುಂದಿನ ಯೋಜನಾ ಕಾರ್ಯಕ್ರಮಗಳನ್ನು ನಿರಂತರವಾಗಿ ವ್ಯವಸ್ಥಿತ ರೀತಿಯಲ್ಲಿ ಮುಂದುವರಿಸುವ ನಿಟ್ಟಿನಲ್ಲಿ ಸುಮಾರು 10-00 ಕೋಟಿ ಮೊತ್ತದ ದೇಣಿಗೆಯನ್ನು ಮುಂಗಡವಾಗಿ ಸಂಗ್ರಹಿಸುವುದು ಉತ್ತಮವೆಂದು ತಿಳಿಸಿ ಪ್ರಥಮ ಹೆಜ್ಜೆಯಾಗಿ ತಾನು ರೂ 1-00 ಕೋಟಿ ಮೊತ್ತವನ್ನು ದೇಣಿಗೆಯ ರೂಪದಲ್ಲಿ ನೀಡುವುದಾಗಿ ಎಂದು ಘೋಷಣೆ ಮಾಡಿದರು.

ಸ್ಥಾಪಕಾಧ್ಯಕ್ಷರಾದ ಪಟ್ಲ ಸತೀಶ್ ಶೆಟ್ಟಿಯವರು ಇವತ್ತಿನವರೆಗೂ ಫೌಂಡೇಶನಿಗೆ ಸಹಕರಿಸಿದ ಸರ್ವರಿಗೂ ಅಭಿನಂದನೆ ಸಲ್ಲಿಸುವುದರೊಂದಿಗೆ, ಈಗಾಗಲೇ ಟ್ರಸ್ಟಿಗೆ 1-00 ಕೋಟಿ ಮೊತ್ತವನ್ನು ನೀಡಿ ಮಹಾದಾನಿಯಾಗಿರುವ ಶಶಿಧರ ಶೆಟ್ಟಿಯವರು ದಶಮಾನೋತ್ಸವ ಕಾರ್ಯಕ್ರಮಕ್ಕೂ 1-00 ಕೋಟಿ ದೇಣಿಗೆಯ ಘೋಷಣೆಗೆ ಶಿರಬಾಗಿ ಕೃತಜ್ಞತೆಯನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ಶ್ರೀಮತಿ ಪೂರ್ಣಿಮ ಶಾಸ್ತ್ರಿ, ಶ್ರೀ ಲೋಕನಾಥ ಶೆಟ್ಟಿ, ಶ್ರೀ ವಿನಿತ್ ಕುಮಾರ್ ಶೆಟ್ಟಿ ಫೌಂಡೇಶನಿನ ಟ್ರಸ್ಟಿಗಳಾಗಿ ಸೇರ್ಪಡೆಗೊಂಡರು. ಗೃಹ ನಿರ್ಮಾಣಕ್ಕಾಗಿ ರೂ15 ಲಕ್ಷ ರೂಪಾಯಿ ಮೊತ್ತವನ್ನು 9 ಮಂದಿ ಕಲಾವಿದರಿಗೆ ವಿತರಿಸಲಾಯಿತು.

2025ರ ಜನವರಿ 8ರಂದು ಶಾಸಕರಾದ ರಾಜೇಶ್ ನಾಯ್ಕ್ ರವರ ಒಡೆತನದ ಒಡ್ಡೂರು ಫಾರ್ಮಿನಲ್ಲಿ ನಡೆಯಲಿರುವ ಯಕ್ಷ ಶಿಕ್ಷಣ ವಿದ್ಯಾರ್ಥಿ ಸಮ್ಮಿಲನದ ಬಗ್ಗೆ ಬಂಟ್ವಾಳ ಘಟಕದ ಅಧ್ಯಕ್ಷರಾದ ಚಂದ್ರಹಾಸ ಶೆಟ್ಟಿಯವರು ಮಾಹಿತಿ ನೀಡಿದರು.

ವೇದಿಕೆಯಲ್ಲಿ ಫೌಂಡೇಶನಿನ ಕೋಶಾಧಿಕಾರಿಯವರಾದ ಸಿಎ ಸುದೇಶ್ ಕುಮಾರ್ ರೈ ಉಪಸ್ಥಿತರಿದ್ದರು.

ಪ್ರಧಾನ ಕಾರ್ಯದರ್ಶಿಗಳಾದ ಅಡ್ಯಾರ್ ಪುರುಷೋತ್ತಮ ಕೆ ಭಂಡಾರಿ ಕಾರ್ಯಕ್ರಮ ನಿರ್ವಹಿಸಿದರು.

error: Content is protected !!