ಮಂಗಳೂರು: TRAI ಹೆಸರಿನಲ್ಲಿ ಕರೆ ಮಾಡಿ ವ್ಯಕ್ತಿಯೊಬ್ಬರಿಗೆ ಡಿಜಿಟಲ್ ಅರೆಸ್ಟ್ ಮಾಡಿ 1 ಕೋಟಿ 71 ಲಕ್ಷ ರೂ. ವಂಚಿಸಿದ ಆರೋಪಿಯನ್ನು ಮಂಗಳೂರು ಸಿಇಎನ್ ಕ್ರೈಂ ಪೊಲೀಸರು ಕೇರಳದಲ್ಲಿ ಬಂಧಿಸಿದ್ದಾರೆ.
ಕೇರಳದ ಕೋಯಿಕೋಡ್ ಮೂಲದ ಆಕಾಶ್ ಎ. (22) ಬಂಧಿತ ಆರೋಪಿ. ಈ ಪ್ರಕರಣದಲ್ಲಿ, ಅಪರಿಚಿತ ವ್ಯಕ್ತಿಯು TRAI ನಿಂದ ಪ್ರತಿನಿಧಿಸಿ ಕರೆ ಮಾಡುವುದಾಗಿ ಪರಿಚಯಿಸಿಕೊಂಡು, ಬಳಿಕ ನಿಮ್ಮ ಹೆಸರಿನಲ್ಲಿ ಇನ್ನೊಂದು ಮೊಬೈಲ್ ನಂಬರ್ ರಿಜಿಸ್ಟರ್ ಆಗಿದ್ದು, ಮುಂಬೈನ ಅಂಧೇರಿ(E)ಯಲ್ಲಿ ಹಲವು ಕಾನೂನುಬಾಹಿರ ಚಟುವಟಿಕೆಗೆ ಬಳಸಲಾಗಿದೆ. ಮಾರ್ಕೆಟಿಂಗ್ ನೆಪದಲ್ಲಿ ನಿಮಗೆ ಸಂಬಂಧಿಸಿದ ಮೊಬೈಲ್ ನಂಬರ್ನಿಂದ ಕರೆ ಮಾಡಿ ಕಿರುಕುಳ ಕೊಡುತ್ತಿರುವ ಬಗ್ಗೆ ಎಫ್‌ಐಆರ್ ದಾಖಲಾಗಿದೆ. ಅಲ್ಲದೇ, ಕೂಡಲೇ ಅಂಧೇರಿ ಪೊಲೀಸ್ ಠಾಣೆಗೆ ಸಂಪರ್ಕಿಸಬೇಕು, ಇಲ್ಲದಿದ್ದಲ್ಲಿ ನಿಮ್ಮ ಮೊಬೈಲ್ ನಂಬರ್ ಸೇವೆಯನ್ನು 2 ಗಂಟೆಗಳಲ್ಲಿ ಕೊನೆಗೊಳಿಸಲಾಗುವುದು ಎಂಬುದಾಗಿ ಬೆದರಿಸಿದ್ದ. ಜೊತೆಗೆ, ಅಂಧೇರಿಯ ಕೆನರಾ ಬ್ಯಾಂಕ್‌ನಲ್ಲಿ ನಿಮ್ಮ ಹೆಸರಿನಲ್ಲಿ ಖಾತೆ ತೆರೆದು ವಂಚನೆಗೆ ಬಳಸಲಾಗಿದೆ. ಇದಕ್ಕೆ ಐಡೆಂಟಿಟಿ ಬಳಸಿ ಸಿಮ್ ಖರೀದಿಸಲಾಗಿದ್ದು, ಹಾಗಾಗಿ ನಿಮ್ಮನ್ನು ಬಂಧಿಸಲಾಗುವುದು ಎಂದಿದ್ದಾನೆ.
ಆ ಬಳಿಕ ಹಂತ, ಹಂತವಾಗಿ ಒಟ್ಟು 1 ಕೋಟಿ 71 ಲಕ್ಷ ರೂ. ಹಣವನ್ನು ಪಡೆದು ವಂಚನೆ ಮಾಡಿದ್ದು , ಈ ಬಗ್ಗೆ ದೂರು ನೀಡಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿ ಆಕಾಶ್ ಎಂಬಾತನನ್ನು ಕೇರಳಕ್ಕೆ ತೆರಳಿ ಬಂಧಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.