ಹುಬ್ಬಳ್ಳಿ: ಅಚ್ಚವ್ವನ ಕಾಲೋನಿಯಲ್ಲಿ ಸಂಭವಿಸಿದ ಸಿಲಿಂಡರ್ ಸ್ಫೋಟದಲ್ಲಿ ದೇಶ ಸೇವೆಯ ಕನಸು ಹೊತ್ತ ಯುವಕನೋರ್ವ ಸಾವನ್ನಪ್ಪಿದ್ದು, ಇದ್ದಿದ್ದ ಓರ್ವ ಮಗನನ್ನು ಕಳೆದುಕೊಂಡ ಪೋಷಕರು ಮಮ್ಮಲ ಮರುಗಿದ್ದಾರೆ.
20 ವರ್ಷ ವಯಸ್ಸಿನ ಸಂಜಯ ಸವದತ್ತಿ ಇದೇ ಮೊದಲ ಬಾರಿಗೆ ಅಯ್ಯಪ್ಪ ಸೇವೆ ಮಾಡಲು ಮಾಲೆ ಹಾಕಿದ್ದರು. ಕಳೆದ ಮೂವತ್ತು ದಿನಗಳಿಂದ ಅಯ್ಯಪ್ಪನಿಗಾಗಿ ವೃತ ಮಾಡಿ ಅಯ್ಯಪ್ಪ ಸ್ವಾಮಿಯ ದರ್ಶನದ ಆಸೆಯಲ್ಲಿದ್ದರು. ಆದರೆ ಡಿ.22ರ ರಾತ್ರಿ ಸಂಭವಿಸಿದ ಗ್ಯಾಸ್ ಸಿಲಿಂಡರ್ ಸ್ಪೋಟದಲ್ಲಿ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಫಲಿಸದೆ ಇಂದು ಮುಂಜಾನೆ ಅಸುನೀಗಿದ್ದಾರೆ.
ಸಂಜಯ ಸವದತ್ತಿ, ಅವರ ಪೋಷಕರಿಗಿದ್ದ ಒಬ್ಬನೇ ಒಬ್ಬ ಮಗ. ಕೋವಿಡ್ ಸಮಯದಲ್ಲಿ ಈತ ತರಕಾರಿ ಮಾರಿ ಕುಟುಂಬ ಸಾಗಿಸಿದ್ದನು. ಸಣ್ಣ ವಯಸ್ಸಿನಲ್ಲಿ ಕುಟುಂಬದ ಜವಾಬ್ದಾರಿ ಹೊತ್ತಿದ್ದ. ಆದರೆ ಅಚಾನಕ್ಕಾಗಿ ಸಂಭವಿಸಿದ ಅವಘಡಲ್ಲಿ ಇದ್ದ ಒಬ್ಬ ಮಗನನ್ನು ಕಳೆದುಕೊಂಡು ಸಂಜಯ ಸವದತ್ತಿ ಪೋಷಕರು ಕಣ್ಣೀರು ಹಾಕಿದ್ದಾರೆ.