ಯಕ್ಷ ಸಂಭ್ರಮ ಕಾರ್ಯಕ್ರಮಕ್ಕೆ ಹರಿದು ಬಂದ ಜನಸ್ತೋಮ: ಯಕ್ಷ ಪ್ರೇಮಿಗಳಿಂದ ತುಂಬಿ ತುಳುಕಿದ ನವಶಕ್ತಿ ಕ್ರೀಡಾಂಗಣ:

 

 

ಬೆಳ್ತಂಗಡಿ:ಯಕ್ಷಧ್ರುವ ಪಟ್ಲ ಫೌಂಡೇಶನ್ ರಿ. ಮಂಗಳೂರು ಬೆಳ್ತಂಗಡಿ ಘಟಕ ಇದರ ವತಿಯಿಂದ ಡಿ.14 ರಂದು ಗುರುವಾಯನಕೆರೆ ನವಶಕ್ತಿ ಕ್ರೀಡಾಂಗಣದಲ್ಲಿ ಯಕ್ಷ ಸಂಭ್ರಮ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದೆ.

ಸಂಜೆ 5:30 ಕ್ಕೆ ಸರಿಯಾಗಿ ಗುರುವಾಯನಕೆರೆ ಬಂಟರಭವನದಲ್ಲಿ ಪಾವಂಜೆ ಮೇಳದ ಶ್ರೀ ದೇವರಿಗೆ ಪೂಜೆ ನಡೆದು ಕುಣಿತ ಭಜನಾ ತಂಡಗಳಿಂದ ಭಜನಾ ಸೇವೆ ನಡೆಯಿತು.‌ ಬಾಲಾಂಜನೇಯ ವ್ಯಾಯಾಮ ಶಾಲೆ ಕುಂದೂರು ಇಲ್ಲಿ ವಿದ್ಯಾರ್ಥಿಗಳಿಂದ ತಾಲೀಮು ಪ್ರದರ್ಶನ ನಡೆದು ಬಳಿಕ ಶ್ರೀ ದೇವರ ಮೆರವಣಿಗೆ ಗುರುವಾಯನಕೆರೆ ಪೇಟೆ ಮೂಲಕ ನವಶಕ್ತಿ ಕ್ರೀಡಾಂಗಣಕ್ಕೆ ತಲುಪಿತು.‌ ವೈಭವದ ಮೆರವಣಿಗೆಯಲ್ಲಿ ವಿವಿಧ ವೇಷ ಭೂಷಣ, ಕುಣಿತ ಭಜನಾ ತಂಡಗಳು, ಸಾವಿರಾರು ಯಕ್ಷಪ್ರೇಮಿಗಳು ಸಾಕ್ಷಿಯಾದರು. ರಾತ್ರಿ
8:30ರ ಸುಮಾರಿಗೆ ಚೌಕಿ ಪೂಜೆ ನಡೆದು ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಪ್ರದರ್ಶಗೊಂಡಿತು.

ಪಟ್ಲ ಫೌಂಡೇಶನ್ ಬೆಳ್ತಂಗಡಿ ‌ಘಟಕದ ಗೌರವಾಧ್ಯಕ್ಷರಾದ ಶಶಿಧರ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ಸಭಾಕಾರ್ಯಕ್ರಮ ನಡೆದು ಸಾಧಕರಿಗೆ ಸನ್ಮಾನ‌ ಹಾಗೂ ಗೌರವ ಸಮರ್ಪಣಾ ಕಾರ್ಯಕ್ರಮ‌ ನಡೆಯಿತು.‌
ಇದೇ ಸಂದರ್ಭದಲ್ಲಿ ಹಿರಿಯ ಕಲಾವಿದ ಅರುವ ಕೊರಗಪ್ಪ ಶೆಟ್ಟಿಯವರಿಗೆ ಯಕ್ಷಸಂಭ್ರಮ-2024 ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಚಲಚಿತ್ರನಟ ರಾಜ್ ಬಿ. ಶೆಟ್ಟಿ‌, ಸಂಯುಕ್ತ ಹೆಗಡೆ, ನಿರೀಕ್ಷಾ ಶೆಟ್ಟಿ ವಿಶೇಷವಾಗಿ ಗಮನ ಸೆಳೆದರು.

ಸುಮಾರು 5 ಎಕರೆ ಜಾಗದ ವಿಶಾಲ‌ ಮೈದಾನದಲ್ಲಿ ವಿವಿಧ ಖಾದ್ಯ ಸವಿಯಲು ಅವಕಾಶ ಕಲ್ಪಿಸಲಾಗಿತ್ತು.
ವಿವಿಧ ಕೌಂಟರ್ ತೆರೆಯಲಾಗಿದ್ದರೂ ಪ್ರತೀ ಕೌಂಟರ್ ನಲ್ಲೂ ಜನಜಂಗುಳಿ ತುಂಬಿತ್ತು.

ಪಾರ್ಕಿಂಗ್ ವ್ಯವಸ್ಥೆ ಸುಸಜ್ಜಿವಾಗಿತ್ತು. ಕ್ಷಣ ಕ್ಷಣಕ್ಕೂ ಯಕ್ಷಕಲಾಭಿಮಾನಿಗಳ ಸಂಖ್ಯೆ ಹೆಚ್ಚಾಗುತ್ತಿತ್ತು. ಅಂದಾಜು ಸುಮಾರು ಹತ್ತು ಸಾವಿರ ಮಂದಿ ಕಾರ್ಯಕ್ರಮದಲ್ಲಿ ಸೇರಿದ್ದು, ವಿಶಾಲ ಮೈದಾನದಲ್ಲಿ ಎಲ್ಲೆಲ್ಲೂ ನೋಡಿದರೂ ಜನ ಜಂಗುಳಿಯಿಂದ ಯಕ್ಷ ಜಾತ್ರೆಯಾಗಿ ನವಶಕ್ತಿ ಕ್ರೀಡಾಂಗಣ ಮಾರ್ಪಟ್ಟಿತು.

error: Content is protected !!