ಸಾಂದರ್ಭಿಕ ಚಿತ್ರ
ಉತ್ತರ ಪ್ರದೇಶ: ಕರ್ಹಾಲ್ ಉಪಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕುವುದಾಗಿ ಹೇಳಿದ ಯುವತಿ ಭೀಕರವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಕಂಜಾರಾ ನದಿಯ ಸೇತುವೆಯ ಬಳಿ ಗೋಣಿಚೀಲದಲ್ಲಿ ಯುವತಿಯ ಬೆತ್ತಲೆ ದೇಹ ಪತ್ತೆಯಾಗಿದೆ.
ಕರ್ಹಾಲ್ ಉಪಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕುವ ಇಂಗಿತವನ್ನು ಯುವತಿ ವ್ಯಕ್ತಪಡಿಸಿದ್ದು, ಇದು ಸಮಾಜವಾದಿ ಪಕ್ಷದ ಪ್ರಶಾಂತ್ ಅವರನ್ನು ಕೆರಳಿಸಿತ್ತು ಎಂದು ಕುಟುಂಬ ಹೇಳಿಕೊಂಡಿದೆ. ಸಮಾಜವಾದಿ ಪಕ್ಷಕ್ಕೆ ಮತ ಹಾಕದಿದ್ದರೆ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಯುವತಿಗೆ ಪ್ರಶಾಂತ್ ಬೆದರಿಕೆ ಹಾಕಿದ್ದರು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಇದಾದ ಬಳಿಕ ನವೆಂಬರ್ 19ರಂದು ಇಬ್ಬರು ಶಂಕಿತರು ಯುವತಿಯನ್ನು ಬೈಕ್‌ನಲ್ಲಿ ಕರೆದೊಯ್ದಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ನ.20ರಂದು ಆಕೆಯ ದೇಹವು ಗೋಣಿಚೀಲದಲ್ಲಿ ಪತ್ತೆಯಾಗಿದೆ.
ಯುವತಿಯ ಕುಟುಂಬವು ಪ್ರಶಾಂತ್ ಯಾದವ್ ಎಂಬ ವ್ಯಕ್ತಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದು, ಅಪರಾಧದ ಹಿಂದೆ ರಾಜಕೀಯ ಉದ್ದೇಶವಿದೆ, ಹತ್ಯೆಗೂ ಮುನ್ನ ಅತ್ಯಾಚಾರ ಎಸಗಲಾಗಿತ್ತು ಎಂದು ಕುಟುಂಬದವರು ಆರೋಪಿಸಿದ್ದಾರೆ.
ಮಾಹಿತಿ ಪಡೆದು ಸ್ಥಳಕ್ಕೆ ಬಂದ ಪೊಲೀಸರು ಪ್ರಾಥಮಿಕ ತನಿಖೆ ನಡೆಸಿದ್ದಾರೆ. ಮಹಿಳೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.