ಬೆಳ್ತಂಗಡಿ: ಮಂಗಳೂರು – ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ಪುಂಜಾಲಕಟ್ಟೆಯಿಂದ ಚಾರ್ಮಾಡಿಯವರೆಗಿನ ಹೆದ್ದಾರಿ ಕಾಮಗಾರಿ ಕಳೆದ ಎರಡು ವರ್ಷಗಳಿಂದ ಪ್ರಾರಂಭವಾಗಿದ್ದರೂ ಹಲವಾರೂ ವಿಘ್ನಗಳಿಂದಾಗಿ ನಿಧಾನಗತಿಯಲ್ಲಿ ಸಾಗುತ್ತಿತ್ತು. ಈ ಮಧ್ಯೆ ಮೊದಲು ಕಾಮಗಾರಿಯ ಟೆಂಡರ್ ವಹಿಸಿಕೊಂಡ ಡಿ.ಪಿ. ಜೈನ್ ಕಂಪನಿಯಿಂದ ಕಾಮಗಾರಿಯ ನಿರ್ವಹಣೆಯನ್ನು ಮುಗ್ರೋಡಿ ಕನ್ಸ್ ಸ್ಟ್ರಕನ್ಸ್ ಅವರು ವಹಿಸಿಕೊಂಡಿದ್ದು, ಇದೀಗ ಕಾಮಗಾರಿ ಭಾರೀ ವೇಗ ಪಡೆದಿದೆ.
ಡಿ.ಪಿ. ಜೈನ್ ಕಂಪನಿ ಅಲ್ಲಲ್ಲಿ ಕಾಮಗಾರಿ ಆರಂಭಿಸಿ ಬಳಿಕ ಕೆಲವು ತಿಂಗಳು ಕೆಲಸವನ್ನೇ ನಿಲ್ಲಿಸಿದ್ದರು. ಇದರಿಂದ ರಸ್ತೆ ಸಂಚಾರ ಸಂಪೂರ್ಣ ಹದೆಗೆಟ್ಟು ಹೋಗಿತ್ತು. ಈ ಸಂದರ್ಭದಲ್ಲಿ ಜನರು ಅನುಭವಿಸಿದ ಸಂಕಷ್ಟ ಒಂದೆಡರಲ್ಲ. ಹೆದ್ದಾರಿಯಲ್ಲಿ ಸಾಗುತ್ತಿದ್ದ ವಾಹನ ಸವಾರರು ಹಿಡಿ ಶಾಪ ಹಾಕುವ ರೀತಿಯಲ್ಲಿ ರಸ್ತೆ ಹಾಳಾಗಿತ್ತು. ಕಾಮಗಾರಿ ಮುಗ್ರೋಡಿಯವರಿಗೆ ಹಸ್ತಾಂತರವಾದ ಬಳಿಕ ಮುಗ್ರೋಡಿಯವರು ಮೊದಲು ದೊಡ್ಡ ದೊಡ್ಡ ಹೊಂಡ ಮುಚ್ಚುವ ಕೆಲಸ ಮಾಡಿದರು. ಸಧ್ಯ ಮಳೆ ಕಡಿಮೆ ಆಗಿದ್ದು ಈಗ ಹೆದ್ದಾರಿ ಕಾಮಗಾರಿ ವೇಗ ಮತ್ತಷ್ಟು ಹೆಚ್ಚಾಗಿದೆ.
ಮುಂಡಾಜೆ, ಬೆಳ್ತಂಗಡಿ ಸೇತುವೆ ಕೆಲಸ ಭರದಿಂದ ಸಾಗುತ್ತಿದ್ದು, ತಾಲೂಕಿನ ಜನರಲ್ಲಿ, ವಾಹನ ಸವಾರರ ಮುಖದಲ್ಲಿ ಮಂದಾಹಾಸ ಮೂಡಿದೆ.ಬೆಳ್ತಂಗಡಿ ಸೇತುವೆಯ ಎರಡೂ ಭಾಗದಲ್ಲಿ ನಿರಂತರವಾಗಿ ಕಾಮಗಾರಿ ನಡೆಯುತ್ತಿದೆ.
ಕಾಶಿಬೆಟ್ಟುವಿನಲ್ಲೂ ಕಾಮಗಾರಿ ಚುರುಕುಗೊಂಡಿದೆ. ತಾಲೂಕಿನ ಕೆಲ ಭಾಗದಲ್ಲಿ ಆಗಾಗ ಸಂಭವಿಸುತ್ತಿದ್ದ ಟ್ರಾಫಿಕ್ ಜಾಮ್ ಮುಗ್ರೋಡಿ ಕನ್ಸ್ ಸ್ಟ್ರಕನ್ಸ್ ಕಾಮಗಾರಿ ಆರಂಭಿಸಿದ ಬಳಿಕ ಕಡಿಮೆಯಾಗಿದೆ. ಸದ್ಯ ವಾಹನ ಸವಾರರಿಗೆ ಸ್ವಲ್ಪ ಮಟ್ಟಿನ ತಲೆಬಿಸಿ ಕಡಿಮೆಯಾಗಿದ್ದು, ಮುಂದಿನ ಎಲ್ಲಾ ಕಾಮಗಾರಿಗಳು ಯಾವುದೇ ಅಡೆ ತಡೆ ಇಲ್ಲದೇ ಕಳಪೆ ರಹಿತವಾಗಿ ಅತ್ಯಂತ ಶೀಘ್ರದಲ್ಲಿ ಮುಗಿಯಲಿ, ಎಂಬುವುದೇ ಸಾರ್ವಜನಿಕರ ಅಭಿಪ್ರಾಯವಾಗಿದೆ.