
ಬೆಳ್ತಂಗಡಿ: ಸಾನಿಧ್ಯ ಕೌಶಲ್ಯ ತರಬೇತಿ ಕೇಂದ್ರ, ಉಜಿರೆಯಲ್ಲಿ ವಿಶೇಷ ಮಕ್ಕಳೊಂದಿಗೆ ರಕ್ಷಾಬಂಧನ ಕಾರ್ಯಕ್ರಮವನ್ನು ಸಂಭ್ರಮದಿಂದ ಆಚರಿಸಲಾಯಿತು.ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡ್ವೆಟ್ನಾಯ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ, ದೇವರ ಸಮಾನರಾದ ಈ ಮಕ್ಕಳಿಂದ ರಕ್ಷೆ ಕಟ್ಟಿಸಿಕೊಳ್ಳುತ್ತಿರುವುದು ತಮ್ಮ ಪುಣ್ಯ ಎಂದು ಹೇಳಿದರು. ಬಳಿಕ ಮಕ್ಕಳಿಗೆ ಸಿಹಿತಿಂಡಿ ವಿತರಿಸಿ ರಕ್ಷಾಬಂಧನದ ಶುಭಾಶಯಗಳನ್ನು ಕೋರಿದರು
ತಹಶೀಲ್ದಾರ್ ಎನ್.ಎಸ್. ನರಗುಂದ ಅವರು, ವಿಶೇಷ ಮಕ್ಕಳೊಂದಿಗೆ ರಕ್ಷಾಬಂಧನ ಆಚರಿಸುತ್ತಿರುವುದು ತಮಗೆ ಅತೀವ ಸಂತೋಷವನ್ನುಂಟು ಮಾಡಿದೆ ಎಂದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪ್ರಿಯ ಆಗ್ನೆಸ್ ಚಾಕೋ ಅವರು ಮಾತನಾಡಿ, ವೈಫಲ್ಯಗಳನ್ನು ದಿಟ್ಟತನದಿಂದ ಎದುರಿಸಿ ಮುನ್ನಡೆದರೆ ಜೀವನದಲ್ಲಿ ಶ್ರೇಷ್ಠ ಸಾಧನೆ ಮಾಡಲು ಸಾಧ್ಯ ಎಂದು ಮಕ್ಕಳಿಗೆ ಧೈರ್ಯದ ಮಾತುಗಳನ್ನಾಡಿದರು.
ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ನಿಕಟಪೂರ್ವ ಅಧ್ಯಕ್ಷ ಪ್ರಸಾದ್ ಶೆಟ್ಟಿ ಎಣಿಂಜೆ ಮಕ್ಕಳಿಗೆ ಸಿಹಿ ತಿಂಡಿ ವಿತರಿಸಿ, ನಿಷ್ಕಲ್ಮಶ ಮನಸ್ಸಿನ, ಕಪಟವನ್ನರಿಯದ ಮುಗ್ಧ ಮಕ್ಕಳೊಂದಿಗೆ ಹಾಗೂ ಸೇವೆಯಲ್ಲೇ ದೇವರನ್ನು ಕಾಣುವ ಇಲ್ಲಿನ ಸಿಬ್ಬಂದಿಗಳೊಂದಿಗೆ ರಕ್ಷಾಬಂಧನ ಆಚರಿಸುತ್ತಿರುವುದು ಅರ್ಥಪೂರ್ಣ ಕಾರ್ಯಕ್ರಮವಾಗಿದೆ ಎಂದರು. ಬಳಿಕ ಪತ್ರಕರ್ತರ ಸಂಘದ ವತಿಯಿಂದ ಮಕ್ಕಳಿಗೆ ಸಿಹಿತಿಂಡಿ ವಿತರಿಸಲಾಯಿತು.
ಬೆಳ್ತಂಗಡಿ ಟ್ರಾಫಿಕ್ ಠಾಣೆಯ ಉಪನಿರೀಕ್ಷಕ ಕಿಶೋರ್ ಹಾಗೂ ಸಿಬ್ಬಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಕ್ಕಳೊಂದಿಗೆ ರಕ್ಷಾಬಂಧನ ಆಚರಿಸಿದರು.
ಸಾನಿಧ್ಯ ಕೌಶಲ್ಯ ತರಬೇತಿ ಕೇಂದ್ರದ ಸಲಹಾ ಸಮಿತಿ ಸದಸ್ಯರಾದ ಪ್ರೇಮ್ ರಾಜ್ ರೋಷನ್ ಸಿಕ್ವೇರಾ, ಸಂಗೀತಗಾರ ಸುನಿಲ್ ದೇವಾಡಿಗ ಉಜಿರೆ, ಗುತ್ತಿಗೆದಾರ ದಯಾನಂದ ಬೆಳ್ತಂಗಡಿ, ಹೋಟೆಲ್ ಮಾಲೀಕ ಪ್ರಮೋದ್, ಸದಾಶಿವ ಲಾಯಿಲ ಸೇರಿದಂತೆ ಸಾನಿಧ್ಯ ಕೇಂದ್ರದ ಅನೇಕ ಹಿತೈಷಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸಾನಿಧ್ಯ ಕೇಂದ್ರದ ಮೇಲ್ವಿಚಾರಕಿ ಶ್ರೀಮತಿ ಮಲ್ಲಿಕಾ, ಶಿಕ್ಷಕಿಯರು ಹಾಗೂ ಶಿಕ್ಷಕೇತರ ಸಿಬ್ಬಂದಿ ಅತಿಥಿಗಳಿಗೆ ಆರತಿ ಬೆಳಗಿ, ರಕ್ಷೆ ಕಟ್ಟುವ ಮೂಲಕ ಕಾರ್ಯಕ್ರಮವನ್ನು ಆತ್ಮೀಯವಾಗಿ ನೆರವೇರಿಸಿದರು.