ಚಿಕ್ಕಮಗಳೂರು: ಭೂಕುಸಿತದ ಅಪಾಯದಲ್ಲಿ 5 ಗ್ರಾಮಗಳು..!: ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾ ಸಮೀಕ್ಷೆ: 5 ಗ್ರಾಮಸ್ಥರ ಸ್ಥಳಾಂತರಕ್ಕೆ ಡಿಸಿ ಸೂಚನೆ: ಅಪಾಯದಲ್ಲಿ ಚಂದ್ರದ್ರೋಣ, ಮುಳ್ಳಯ್ಯನಗಿರಿ, ಚಾರ್ಮಾಡಿ ಘಾಟ್..!

ಚಿಕ್ಕಮಗಳೂರು: ಕೇರಳದ ವಯನಾಡು ಗುಡ್ಡ ಕುಸಿತ ದುರಂತದ ಬಳಿಕ ಕರ್ನಾಟಕದಲ್ಲಿಯೂ ಸಂಭಾವ್ಯ ಅಪಾಯಕಾರಿ ಪ್ರದೇಶಗಳ ಬಗ್ಗೆ ಪರಿಶೀಲನೆ ನಡೆಸುವಂತೆ ಜಿಯೋಲಾಜಿಕಲ್ ಸರ್ವೇ ತಂಡದ ತನಿಖೆಗೆ ಸರ್ಕಾರ ಆದೇಶ ನೀಡಿದ್ದು, ಸದ್ಯ ಸಮೀಕ್ಷೆ ನಡೆಸಿದ ತಂಡದಿಂದ ಆಘಾತಕಾರಿ ಅಂಶಗಳು ಹೊರಬಿದ್ದಿದೆ.

ಚಿಕ್ಕಮಗಳೂರು ಜಿಲ್ಲೆಯ 5 ಗ್ರಾಮಗಳಲ್ಲಿ ಮತ್ತೆ ಭೂ ಕುಸಿತವಾಗುವ ಸಾಧ್ಯತೆ ಇದೆ ಎಂದು ಜಿಯೋಲಾಜಿಕಲ್ ವಿಜ್ಞಾನಿಗಳ ತಂಡ ಮುನ್ನೆಚ್ಚರಿಕೆ ನೀಡಿದೆ. ಹೀಗಾಗಿ ಮುಂದಿನ ಮಳೆಗಾಲದೊಳಗೆ ಕೊಪ್ಪ ತಾಲೂಕಿನ ಗುಡ್ಡೇತೋಟ, ಬಸರಿಕಟ್ಟೆ, ಶೃಂಗೇರಿ ತಾಲೂಕಿನ ಕೆರೆದಂಡೆ, ಕಳಸ ತಾಲೂಕಿನ ಸೋಮನಕಟ್ಟೆ, ಚನ್ನಹಡ್ಲು ಗ್ರಾಮಗಳಲ್ಲಿನ ಜನರನ್ನು ಸ್ಥಳಾಂತರಕ್ಕೆ ಮಾಡಬೇಕೆಂದು ಸೂಚನೆ ನೀಡಲಾಗಿದೆ.

ಮಳೆ ಹೆಚ್ಚಾದ್ರೆ ಈ ಭಾಗದಲ್ಲಿ ಭೂ ಕುಸಿತವಾಗುವ ಸಾಧ್ಯತೆ ಎಂದು ತಂಡ ಇತ್ತೀಚೆಗೆ ಜಿಲ್ಲಾಧಿಕಾರಿಗೆ ಸಲ್ಲಿಸಿದ ಸಮೀಕ್ಷಾ ವರದಿಯಲ್ಲಿ ಉಲ್ಲೇಖಿಸಿದೆ. 2019 ರಲ್ಲಿಯೂ ಮಹಾಮಳೆಗೆ ಈ 5 ಗ್ರಾಮಗಳಲ್ಲಿ ಭೂಕುಸಿತ ಸಂಭವಿಸಿತ್ತು.

ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾ ವರದಿ ಆಧರಿಸಿ ಕ್ರಮ ಕೈಗೊಳ್ಳಲು ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗರಾಜ್ ತಾಲೂಕು ಆಡಳಿತಕ್ಕೆ ಸೂಚನೆ ನೀಡಿದ್ದಾರೆ. ಗುಡ್ಡೇತೋಟ ಸೇರಿದಂತೆ 5 ಗ್ರಾಮಗಳ ಸ್ಥಳಾಂತರ ಮಾಡಲು ಸೂಚನೆ ನೀಡಲಾಗಿದ್ದು ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾ ವರದಿಯನ್ನು ಸರ್ಕಾರಕ್ಕೆ ಕಳುಹಿಸಿ ಚರ್ಚೆ ನಡೆಸಲಾಗುತ್ತದೆ. ಸರ್ಕಾರದ ಸೂಚನೆ ಮೇರೆಗೆ ಕ್ರಮ ತೆಗೆದುಕೊಳ್ಳುತ್ತೇವೆ, ಪರ್ಯಾಯ ವ್ಯವಸ್ಥೆ ಬಗ್ಗೆ ಚರ್ಚೆ ನಡೆಯುತ್ತಿದ್ದು, ಅಧಿಕಾರಿಗಳ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದಿದ್ದಾರೆ.

ಚಂದ್ರದ್ರೋಣ ಪರ್ವತದ ಸಾಲು, ಮುಳ್ಳಯ್ಯನಗಿರಿ ಹಾಗೂ ಚಾರ್ಮಾಡಿ ಘಾಟಿ ಕೂಡ ಬಹಳ ಅಪಾಯಕಾರಿ ಪ್ರದೇಶಗಳಾಗಿ ಪರಿಣಮಿಸಿವೆ ಎಂದು ಜಿಯೋಲಾಜಿಕಲ್ ಸರ್ವೇ ವರದಿಯಲ್ಲಿ ಉಲ್ಲೇಖಿಸಲಾಗಿದೆ. ವಾಹನಗಳ ಅತಿಯಾದ ದಟ್ಟಣೆ, ಅವೈಜ್ಞಾನಿಕ ಕಾಮಗಾರಿ, ಅತಿಹೆಚ್ಚು ಮಳೆಯಿಂದ ಗುಡ್ಡ, ಭೂ ಕುಸಿತಗಳು ಸಂಭವಿಸುತ್ತಿವೆ ಎಂದಿದೆ.

error: Content is protected !!