ಅಪಘಾತ: ಕ್ಲೀನರ್ ಎದೆ ಸೀಳಿದ್ದ 98 ಸೆಂಮೀ ಉದ್ದದ ಪೈಪ್: ಹೃದಯದ ಸನಿಹವೇ ಗಾಯ..! ಕೆಎಂಸಿಆರ್‌ಐ ವೈದ್ಯರಿಂದ ಯಶಸ್ವಿ ಶಸ್ತ್ರಚಿಕಿತ್ಸೆ : ಮರುಜೀವ ಪಡೆದ ದಯಾನಂದ ಶಂಕರಬಡಗಿ

ಹುಬ್ಬಳ್ಳಿ: ಅಪಘಾತದಲ್ಲಿ ಲಾರಿ ಕ್ಲೀನರ್ ಎದೆ ಸೀಳಿದ್ದ 98 ಸೆಂ.ಮೀ. ಉದ್ದದ ಪೈಪ್ ಹೊರ ತೆಗೆಯುವಲ್ಲಿ ಹುಬ್ಬಳ್ಳಿಯ ಕೆಎಂಸಿಆರ್‌ಐ ವೈದ್ಯರು ಯಶಸ್ವಿಯಾಗಿದ್ದಾರೆ.

ಅ. 2ರಂದು ಬೆಳಗ್ಗೆ 4 ಗಂಟೆಗೆ ರಾಣೆಬೆನ್ನೂರಿನ ಹೂಲಿಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಸರ್ವಿಸ್ ರಸ್ತೆಗೆ ಬಿದ್ದಿತ್ತು. ಪರಿಣಾಮ ಸರ್ವಿಸ್ ರಸ್ತೆಯ ಜಾಲರಿಗೆ ಹಾಕಿದ್ದ ಪೈಪ್ ಕ್ಲೀನರ್ ಶಿರಸಿಯ ಜವಳಮಕ್ಕಿ ಗ್ರಾಮದ ದಯಾನಂದ ಶಂಕರಬಡಗಿ (27) ಅವರ ಎದೆ ಸೀಳಿ ಹೊರ ಬಂದಿತ್ತು.

ಗಾಯಾಳುವನ್ನು ಹುಬ್ಬಳ್ಳಿಯ ಕೆಎಂಸಿಆರ್‌ಐನ ತುರ್ತು ಚಿಕಿತ್ಸಾ ಘಟಕಕ್ಕೆ ದಾಖಲಿಸಲಾಗಿತ್ತು. ಘಟಕದ ಮುಖ್ಯಸ್ಥ ಡಾ.ನಾಗರಾಜ ಚಾಂದಿ ಅವರು ಅಪಾಯವರಿತು ತುರ್ತು ಚಿಕಿತ್ಸೆ ನೀಡಿ ಹಿರಿಯ ವೈದ್ಯರ ಗಮನಕ್ಕೆ ತಂದು ಶೀಘ್ರವೇ ಶಸ್ತ್ರ ಚಿಕಿತ್ಸೆ ನಡೆಸಲು ತೀರ್ಮಾನಿಸಿದರು.

ಅಲ್ಟ್ರಾಸೌಂಡ್ ತಪಾಸಣೆ ಮೂಲಕ ಹೃದಯ ಹಾಗೂ ಪ್ರಮುಖ ರಕ್ತನಾಳಗಳಿಗೆ ಯಾವುದೇ ಹಾನಿಯಾಗಿಲ್ಲವೆಂದು ಡಾ.ವೀಣಾ ಮರಡಿ ಅವರು ಖಚಿತಪಡಿಸಿಕೊಂಡಿದ್ದರು. ಆದರೆ ಎದೆ ಮೂಳೆ ಕೆಲವೆಡೆ ಮುರಿದಿತ್ತು. ಶ್ವಾಸಕೋಶ ಹಾನಿಯಾಗಿತ್ತು. ಎದೆ ಹಿಂಭಾಗದಿAದ ಹೊರಬಂದಿರುವ ಪೈಪ್‌ನೊಂದಿಗೆ ಸಣ್ಣ ಕೊಂಡಿಯೂ ಇತ್ತು. ಹೃದಯದ ಸನಿಹವೇ ಪೈಪ್ ಹಾದು ಹೋಗಿತ್ತು. ಇದೆಲ್ಲವನ್ನೂ ಬಹಳ ಎಚ್ಚರಿಕೆ ನೋಡಿ, 98 ಸೆಂ.ಮೀ. ಪೈಪ್ ಎದೆಯಿಂದ ಹೊರ ತೆಗೆಯಲಾಗಿದೆ ಎಂದು ಕಿಮ್ಸ್ ನಿರ್ದೇಶಕರು ಹಾಗೂ ಕೆಎಂಸಿಆರ್‌ಐ ನಿರ್ದೇಶಕ ಡಾ.ಎಸ್.ಎಫ್. ಕಮ್ಮಾರ ವಿವರಿಸಿದ್ದಾರೆ.

ಸದ್ಯ ದಯಾನಂದ ಶಂಕರಬಡಗಿ ಈಗ ಚೇತರಿಸಿಕೊಳ್ಳುತ್ತಿದ್ದು ಅಗತ್ಯ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ. 7 ಬಾಟಲ್ ರಕ್ತ ನೀಡಲಾಗಿದ್ದು ರಜೆ ದಿನವಾದರೂ ವೈದ್ಯಕೀಯ ತಂಡ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ನೆರವೇರಿಸಿದೆ. ಶುಲ್ಕ ರಹಿತ ಚಿಕಿತ್ಸೆ ನೀಡಲಾಗಿದೆ.

ಶಸ್ತ್ರಚಿಕಿತ್ಸಾ ವಿಭಾಗದ ಸಿ ಯುನಿಟ್ ಮುಖ್ಯಸ್ಥ ಡಾ.ರಮೇಶ ಹೊಸಮನಿ, ವಿವಿಧ ವಿಭಾಗದ ಡಾ.ವಿಜಯ ಕಾಮತ್, ಡಾ.ವಿನಾಯಕ ಬ್ಯಾಟೆಪ್ಪನವರ, ಡಾ.ವಸಂತ ತೆಗ್ಗಿನಮನಿ, ಹೃದ್ರೋಗ ಶಸ್ತ್ರಚಿಕಿತ್ಸಕ ಡಾ.ಕೋಬಣ್ಣ ಕಟ್ಟಿಮನಿ, ಡಾ.ಧರ್ಮೇಶ ಲದ್ದಡ ನೇತೃತ್ವದ ವೈದ್ಯಕೀಯ ತಂಡ ಮಧ್ಯಾಹ್ನ 2ರಿಂದ 4.30ರವರೆಗೆ ಶಸ್ತ್ರಚಿಕಿತ್ಸೆ ಪ್ರಕ್ರಿಯೆ ನಡೆಸಿದೆ.

error: Content is protected !!