ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ2 ಆಗಿ ಬಳ್ಳಾರಿ ಜೈಲು ಸೇರಿರುವ ಆರೋಪಿ ದರ್ಶನ್ ಅವರಿಗೆ ಜೈಲು ವಾಸದ ಕಷ್ಟದ ಜೊತೆಗೆ ಅನಾರೋಗ್ಯ ಕಾಡಿದೆ.
ತೀವ್ರ ಬೆನ್ನು ನೋವಿನಿಂದ ದರ್ಶನ್ ಬಳಲುತ್ತಿರುವ ವಿಷಯ ತಿಳಿದುಬಂದಿದ್ದು ಕೇಂದ್ರ ಕಾರಾಗೃಹದ ವೈದ್ಯರು ಆರೋಗ್ಯ ತಪಾಸಣೆ ನಡೆಸಿದ್ದಾರೆ. ದರ್ಶನ್ ಅವರ ಎಲ್1, ಎಲ್ 2 ಪರಿಶೀಲನೆ ಮಾಡಲಾಗಿದೆ. ಊತ ಹಾಗೆ ಇದೆ, ಇನ್ನೂ ಉಲ್ಬಣವಾಗುವ ಸಾಧ್ಯತೆ ಇದೆ. ಆದ್ದರಿಂದ ತಕ್ಷಣ ಸ್ಕಾನಿಂಗ್ ಮಾಡುವ ಅವಶ್ಯಕತೆ ಇದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಆದರೆ ಬಳ್ಳಾರಿಯಲ್ಲಿ ಸ್ಕ್ಯಾನಿಂಗ್ ಮಾಡಿಸಲು ದರ್ಶನ್ ಒಪ್ಪುತ್ತಿಲ್ಲ ಎಂಬ ಮಾಹಿತಿ ಸಿಕ್ಕಿದೆ. ಒಂದು ವೇಳೆ ಪ್ರಕರಣದಲ್ಲಿ ಜಾಮೀನು ಸಿಕ್ಕಿ ಬಳ್ಳಾರಿ ಜೈಲಿನಿಂದ ಹೊರಬಂದರೆ ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯಬೇಕು ಎಂಬುದು ದರ್ಶನ್ ಉದ್ದೇಶ. ಹಾಗಾಗಿ ಸದ್ಯಕ್ಕೆ ಅವರು ಬಳ್ಳಾರಿಯಲ್ಲಿ ಚಿಕಿತ್ಸೆ ಬೇಡ ಎನ್ನುತ್ತಿದ್ದಾರೆ.