ಸುಳ್ಯ: ಕೇರಳದ ಮ್ಯಾಜಿಸ್ಟ್ರೇಟ್‌ಗೆ ಅಗೌರವ ತೋರಿದ ವೈದ್ಯರು: ಪೊಲೀಸ್ ಠಾಣೆಗೆ ದೂರು ನೀಡಿದ ನ್ಯಾಯಾದೀಶರು

ಸುಳ್ಯ: ಆತ್ಮಹತ್ಯೆಗೆ ಯತ್ನಿಸಿದ್ದ ಯುವತಿಯ ಹೇಳಿಕೆ ಪಡೆಯಲು ಸುಳ್ಯ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿದ ವೇಳೆ ಆಸ್ಪತ್ರೆಯ ಇಬ್ಬರು ವೈದ್ಯರು ಕೇರಳದ ಮ್ಯಾಜಿಸ್ಟ್ರೇಟ್‌ಗೆ ಅಗೌರವ ತೋರಿರುವ ಘಟನೆ ನಡೆದಿದ್ದು ಈ ಬಗ್ಗೆ ಸ್ವತಃ ನ್ಯಾಯಾಧೀಶರೇ ಪೊಲೀಸರಿಗೆ ದೂರು ನೀಡಿದ್ದಾರೆ.

ಕೇರಳದ ಕಾಸರಗೋಡಿನ ದೇಲಂಪಾಡಿಯ ಯುವತಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದು, ಅವರನ್ನು ಸುಳ್ಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆ ಯುವತಿಯ ಹೇಳಿಕೆ ಪಡೆಯಲು ಆಸ್ಪತ್ರೆಗೆ ಮಾಹಿತಿ ನೀಡಿ ಸೆ.21ರ ರಾತ್ರಿ ಆದೂರು ಪೊಲೀಸ್ ಅಧಿಕಾರಿಗಳ ಜೊತೆ ಕೇರಳದ ಮ್ಯಾಜಿಸ್ಟ್ರೇಟ್ ಅಬ್ದುಲ್ ಬಾತಿಷ್ ಅವರು ಸುಳ್ಯದ ಸರ್ಕಾರಿ ಆಸ್ಪತ್ರೆಗೆ ಆಗಮಿಸಿದ್ದರು. ಆತ್ಮಹತ್ಯೆಗೆ ಯತ್ನಿಸಿದ ಯುವತಿಯ ಬಗ್ಗೆ ಆಸ್ಪತ್ರೆಯ ವೈದ್ಯರಲ್ಲಿ ಮಾಹಿತಿ ಕೇಳಿದ್ದು, ಈ ಸಮಯದಲ್ಲಿ ಕರ್ತವ್ಯದಲ್ಲಿದ್ದ ವೈದ್ಯರು ಅದನ್ನು ಲಿಖಿತವಾಗಿ ನೀಡುವಂತೆ ಕೇಳಿದ್ದಾರೆ ಎಂದು ತಿಳಿದು ಬಂದಿದೆ.

ಘಟನೆಯ ಬಳಿಕ ಕೇರಳದ ಮ್ಯಾಜಿಸ್ಟ್ರೇಟ್ ಸುಳ್ಯ ಪೊಲೀಸರಿಗೆ ದೂರು ನೀಡಿದ್ದಾರೆ.

ಆಸ್ಪತ್ರೆಯಲ್ಲಿ ಏನು ನಡೆದಿದೆ ಎಂಬ ಕುರಿತಾದ ವರದಿ ನೀಡುವಂತೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ತಿಮ್ಮಯ್ಯ ಅವರು ತಾಲೂಕು ವೈದ್ಯಾಧಿಕಾರಿಗಳಿಗೆ ಮತ್ತು ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದ ವೈದ್ಯರಿಗೆ ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾ ಎಸ್‌ಪಿ ಯತೀಶ್ ಪ್ರತಿಕ್ರಿಯಿಸಿ , ಕೇರಳದ ನ್ಯಾಯಾಧೀಶರು ನೀಡಿರುವ ದೂರಿನನ್ವಯ ಸುಳ್ಯ ಪೊಲೀಸ್ ಠಾಣೆಯಲ್ಲಿ ಭಾನುವಾರವೇ ಪ್ರಕರಣ ದಾಖಲಾಗಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.

error: Content is protected !!