ಸಾಂದರ್ಭಿಕ ಚಿತ್ರ
ಉತ್ತರ ಪ್ರದೇಶ: 8 ಜನರನ್ನು ತಿಂದು ತೇಗಿರುವ ನರಭಕ್ಷಕ ತೋಳವನ್ನು ಕೊನೆಗೂ ಸೆರೆಹಿಡಿಯುವಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಯಶಸ್ಸಾಗಿದ್ದಾರೆ.
ಬಹ್ರೈಚ್ ಜಿಲ್ಲೆಯಲ್ಲಿ ತೋಳಗಳ ಹಿಂಡು ಜನರ ನಿದ್ದೆಗೆಡಿಸಿತ್ತು. ಕಳೆದ ಮೂರು ತಿಂಗಳಿನಿಂದ ತೋಳಗಳ ಕಾಟ ಮಿತಿಮೀರಿದ್ದು ಹಲವೆಡೆ ದಾಳಿ ನಡೆಸಿ ಆರು ಮಕ್ಕಳನ್ನು ಬಲಿ ಪಡೆದಿದ್ದವು. ಖೈರಿಘಾಟ್ ಪ್ರದೇಶದಲ್ಲಿ ತಾಯಿಯೊಂದಿಗೆ ಸುಖ ನಿದ್ರೆಯಲ್ಲಿದ್ದ ಐದು ವರ್ಷದ ಮಗುವನ್ನು ತೋಳ ಎಳೆದೊಯ್ದಿತ್ತು. ತಾಯಿ ಎದ್ದು ನೋಡಿದಾಗ ಸ್ಥಳದಲ್ಲಿ ರಕ್ತದ ಕಲೆಗಳು ಬಿದ್ದಿದ್ದರಿಂದ ಇದು ತೋಳದ ಕೆಲಸವೆಂದು ಅನುಮಾನ ವ್ಯಕ್ತಪಡಿಸಿದ್ದರು. ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿತ್ತು. ಸುದ್ದಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಇಲಾಖೆ ತಂಡದ ಸಿಬ್ಬಂದಿ ರಾತ್ರಿಯಿಡೀ ಮಗುವಿನ ಹುಡುಕಾಟ ನಡೆಸಿತ್ತು. ಆದರೆ ಮಗು ಪತ್ತೆಯಾಗಿರಲಿಲ್ಲ. ಮಾರನೆ ಬೆಳಗ್ಗೆ ಹೊಲದಲ್ಲಿ ಮಗುವಿನ ಮೃತದೇಹ ಪತ್ತೆಯಾಗಿತ್ತು.
ಈ ಘಟನೆಯ ಹಿಂದಿನ ದಿನ ಹಾರ್ಡಿ ಪೊಲೀಸ್ ಠಾಣೆಯ ಕುಮ್ಹಾರನ್‌ಪುರವಾ ಗ್ರಾಮದಲ್ಲಿ ತೋಳದ ದಾಳಿಯಲ್ಲಿ 45 ವರ್ಷದ ಮಹಿಳೆ ಕೂಡ ಸಾವನ್ನಪ್ಪಿದ್ದರು. ಸದ್ಯ ಗ್ರಾಮಸ್ಥರ ನೆರವಿನಿಂದ ಬಹ್ರೈಚ್ ಅರಣ್ಯ ಇಲಾಖೆಯ ಅಧಿಕಾರಿಗಳು ನಡೆಸಿದ ಹಗಲು ರಾತ್ರಿ ಕಾರ್ಯಾಚರಣೆಯ ಬಳಿಕ ಈ ನರಭಕ್ಷಕ ತೋಳ ಸೆರೆಯಾಗಿದೆ. ಈವರೆಗೆ ಒಟ್ಟು ನಾಲ್ಕು ತೋಳಗಳು ಸೆರೆಯಾಗಿದ್ದು, ಎರಡು ತೋಳಗಳ ಹುಡುಕಾಟ ಇನ್ನೂ ನಡೆಯುತ್ತಿದೆ.