ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ನಟ ದರ್ಶನ್ ರನ್ನು ರಾಜಾತಿಥ್ಯ ಆರೋಪದಲ್ಲಿ ಬಳ್ಳಾರಿ ಸೆಂಟ್ರಲ್ ಜೈಲಿಗೆ ಸ್ಥಳಾಂತರಿಸಲಾಗಿದೆ. ಅಲ್ಲಿ ದರ್ಶನ್ ಅವರನ್ನು ಹೇಗೆ ನೋಡಿಕೊಳ್ಳಬೇಕು ಎಂಬ ಬಗ್ಗೆ ಬಳ್ಳಾರಿ ಬಂಧಿಖಾನೆ ಇಲಾಖೆಯ ಡಿಜಿಪಿ ಮಾಲಿನಿ ಕೃಷ್ಣಮೂರ್ತಿಯವರಿಗೆ ಉತ್ತರ ವಲಯ ಕಾರಾಗೃಹಗಳ ಉಪ ಮಹಾನಿರೀಕ್ಷಕ ಟಿ.ಪಿ ಶೇಷ ಅವರು ಜ್ಞಾಪನಾ ಪತ್ರ ಬರೆದಿದ್ದಾರೆ.
“ದರ್ಶನ್‌ರನ್ನು ಪ್ರತ್ಯೇಕ ಕೊಠಡಿಯಲ್ಲಿರುವುದು, ಈ ಕೊಠಡಿಗೆ 24*7 ಸಿಸಿ ಕ್ಯಾಮರಾ ಕಣ್ಗಾವಲಿನಲ್ಲಿ ಇರಿಸಬೇಕು. ಪ್ರತಿನಿತ್ಯ ಸಿಸಿ ಕ್ಯಾಮರಾ ದೃಶ್ಯಾವಳಿ ಶೇಖರಿಸಬೇಕು. ದರ್ಶನ್ ಇರುವ ಸೆಲ್‌ನ ಕರ್ತವ್ಯಕ್ಕೆ ಮುಖ್ಯವೀಕ್ಷಕ ಅಧಿಕಾರಿ ನಿಯೋಜಿಸಬೇಕು. ಈ ಸೆಲ್‌ಗೆ ಪ್ರತಿನಿತ್ಯ ಜೈಲರ್ ಭೇಟಿ ನೀಡಿ ಭದ್ರತೆ ಪರಿಶೀಲಿಸಬೇಕು. ಕಾರಾಗೃಹದ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಬೀಗ ಹಾಕಬೇಕು ಹಾಗೂ ತೆರೆಯಬೇಕು. ಕರ್ತವ್ಯ ನಿರ್ವಹಿಸುವ ಮುನ್ನ ಪ್ರತಿನಿತ್ಯ ದರ್ಶನ ಸೆಲ್ ತಪಾಸಣೆ ಮಾಡಬೇಕು. ಸೆಲ್‌ಗೆ ನಿಯೋಜಿಸುವ ಸಿಬ್ಬಂದಿ ಬಾಡಿವಾರ್ನ್ ಕ್ಯಾಮರಾ ಧರಿಸಬೇಕು” ಎಂದು ತಿಳಿಸಿದ್ದಾರೆ.
“ಸಾಮಾನ್ಯ ಬಂಧಿಯಂತೆಪರಿಗಣಿಸಿ, ಸಾಮಾನ್ಯ ಬಂಧಿಗೆ ಕೊಡುವ ಸೌಲಭ್ಯ ಮಾತ್ರ ನೀಡಬೇಕು. ಜೈಲಿನಲ್ಲಿ ಬೇರೆ ಕೈದಿಗಳ ಜೊತೆಗೆ ದರ್ಶನ ಬೆರೆಯುವಂತಿಲ್ಲ, ಅಧಿಕಾರಿಗಳು ಸರ್ಪೈಸ್ ವಿಸಿಟ್ ಮಾಡಬೇಕು. ಕಾರಾಗೃಹ ಸುತ್ತಲೂ ಸೂಕ್ತ ಭದ್ರತೆ ಒದಗಿಸಬೇಕು” ಎಂದಿದ್ದಾರೆ.
“ಚಿತ್ರರಂಗದ ಕಲಾವಿದರು, ಅಭಿಮಾನಿಗಳು ಹಾಗೂ ರಾಜಕೀಯ ನಾಯಕರ ಭೇಟಿಗೆ ಅವಕಾಶವಿಲ್ಲ. ದರ್ಶನ್ ಧರ್ಮಪತ್ನಿ, ರಕ್ತಸಂಬಂಧಿ, ವಕಾಲತ್ತು ವಹಿಸಿದ ವಕೀಲರಿಗೆ ಭೇಟಿಗೆ ಮಾತ್ರ ಅವಕಾಶ ನೀಡಬೇಕು” ಎಂದು ತಿಳಿಸಿದ್ದಾರೆ.