ಮೂಡಬಿದ್ರೆ: ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಇತರ ಕಡೆಗಳಲ್ಲಿ ನೇರಪ್ರಸಾರ ಮಾಡುತ್ತಿರುವ ಯೂಟ್ಯೂಬ್ ಚಾನಲ್ ಗಳು ಗುಣಮಟ್ಟ ಹಾಗೂ ಏಕರೂಪದ ದರ ನಿಗದಿ ಸೇರಿದಂತೆ ಇನ್ನಿತರ ವಿಚಾರಗಳ ಬಗ್ಗೆ ಅಸೋಸಿಯೇಷನ್ ರಚಿಸುವ ಅವಶ್ಯಕತೆಯ ಉದ್ಧೇಶಕ್ಕಾಗಿ ಮೂಡಬಿದಿರೆ ಕೋಟೆಬಾಗಿಲು ವೀರ ಮಾರುತಿ ದೇವಸ್ಥಾನದ ಸಭಾಂಗಣದಲ್ಲಿ ಆ.29ರಂದು ಪೂರ್ವಭಾವಿ ಸಭೆ ನಡೆಯಿತು.
ಸಭೆಯಲ್ಲಿ ಮುಂದಿನ ದಿನಗಳಲ್ಲಿ ಕಾರ್ಯಕ್ರಮದ ನೇರ ಪ್ರಸಾರವನ್ನು ಯಾವ ರೀತಿಯಲ್ಲಿ ಮಾಡಬಹುದು ಹಾಗೂ ಏಕರೂಪದ ದರ ನಿಗದಿ ಸೇರಿದಂತೆ ಇನ್ನಿತರ ವಿಚಾರಗಳ ಬಗ್ಗೆ ಚರ್ಚೆ ನಡೆಯಿತು. ಜೊತೆಗೆ ನೇರಪ್ರಸಾರ ಮಾಡುತ್ತಿರುವ ಎಲ್ಲರನ್ನೂ ಒಂದೇ ವೇದಿಕೆಯಡಿಯಲ್ಲಿ ತಂದು ಸಂಘಟನೆ ಮಾಡುವ ಉದ್ಧೇಶದಿಂದ ಅಸೋಸಿಯೇಷನ್ (ಸಂಘ) ರಚಿಸುವ ಬಗ್ಗೆ ಚರ್ಚಿಸಿ ಸೆಪ್ಟಂಬರ್ 17 ರಂದು ಕಾರ್ಕಳದಲ್ಲಿ ಸಭೆ ಸೇರಿ ಅಸೋಸಿಯೇಷನ್ ರಚಿಸುವ ಹಾಗೂ ಪದಾಧಿಕಾರಿಗಳ ಆಯ್ಕೆ ಮಾಡುವ ಬಗ್ಗೆ ಮಾತುಕತೆ ನಡೆಸಲಾಯಿತು.
ದ.ಕ. ಉಡುಪಿ ಹಾಗೂ ಇತರ ಕಡೆಗಳ ನೇರ ಪ್ರಸಾರ ಮಾಡುತ್ತಿರುವ ಆಸಕ್ತ ಚಾನೆಲ್ ನವರನ್ನೂ ಸೇರಿಸಿಕೊಂಡು ಮುಂದುವರಿಯುವ ಬಗ್ಗೆಯೂ ಮಾತುಕತೆ ನಡೆಸಲಾಯಿತು.
ಸಭೆಯಲ್ಲಿ ದಕ್ಷಿಣ ಕನ್ನಡ , ಉಡುಪಿ ಸುಮಾರು 25 ಕ್ಕಿಂತಲೂ ಅಧಿಕ ಮಂದಿ ವಿವಿಧ ಯೂಟ್ಯೂಬ್ ಚಾನಲ್ ನ ಮುಖ್ಯಸ್ಥರು ಭಾಗವಹಿಸಿ ತಮ್ಮ ಅಭಿಪ್ರಾಯ ತಿಳಿಸಿ ಅಸೋಸಿಯೇಷನ್ ರಚನೆಗೆ ಸಂಪೂರ್ಣ ಬೆಂಬಲ ಸೂಚಿಸಿದರು.