ನವದೆಹಲಿ: ಪ್ಯಾರಿಸ್ ಒಲಿಂಪಿಕ್‌ನಿಂದ ಅನರ್ಹಗೊಂಡಿದ್ದ ಕುಸ್ತಿಪಟು ವಿನೇಶ್ ಪೋಗಟ್ ಅವರು ಇಂದು ಭಾರತಕ್ಕೆ ವಾಪಸ್ ಆಗಿದ್ದಾರೆ
ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿನೇಶ್ ಪೋಗಟ್ ಬರುತ್ತಿದ್ದಂತೆ ಅದ್ಧೂರಿ ಸ್ವಾಗತ ಕೋರಲಾಗಿದೆ. ಬಜರಂಗ್ ಪುನಿಯಾ, ಸಾಕ್ಷಿ ಮಲ್ಲಿಕ್ ಸೇರಿದಂತೆ ನೂರಾರು ಬೆಂಬಲಿಗರು ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಭಾರೀ ಹಾರ, ತುರಾಯಿಗಳೊಂದಿಗೆ ಅವರನ್ನು ಸ್ವಾಗತಿಸಿದ ಬಳಿಕ ದೆಹಲಿ ವಿಮಾನ ನಿಲ್ದಾಣದಿಂದ ಹರಿಯಾಣದ ತಮ್ಮ ಗ್ರಾಮ ಬಲಾಲಿಗೆ ತೆರಳಲಿದ್ದಾರೆ.
ತಮ್ಮ ಪರ ದೇಶಾದ್ಯಂತ ವ್ಯಕ್ತವಾದ ಬೆಂಬಲ ಕುರಿತು ವಿನೇಶ್ ಧನ್ಯವಾದ ಅರ್ಪಿಸಿ ಭಾವುಕರಾಗಿದ್ದರು.
ವಿನೇಶ್ ಪೋಗಟ್ ಜೊತೆ ಲಂಡನ್ ಒಲಿಂಪಿಕ್ ಕಂಚು ಪದಕ ವಿಜೇತ ಶೂಟರ್ ಗಗನ್ ಕೂಡ ಒಂದೇ ವಿಮಾನದಲ್ಲಿ ದೆಹಲಿಗೆ ಬಂದಿಳಿದರು. ವಿನೇಶ್ ಜೊತೆಗಿನ ಫೋಟೋವನ್ನು ಎಕ್ಸ್ ನಲ್ಲಿ ಹಂಚಿಕೊಂಡಿರುವ ನಾರಂಗ್ ಅವರು ‘ಚಾಂಪಿಯನ್’ ಎಂದು ಕರೆದಿದ್ದಾರೆ.
“ಕ್ರೀಡಾ ಗ್ರಾಮದಲ್ಲಿ ಮೊದಲ ದಿನದಿಂದಲೂ ಅವರು ಚಾಂಪಿಯನ್ ಆಗಿದ್ದರು. ಅವರು ಸದಾ ನಮ್ಮ ಚಾಂಪಿಯನ್ ಆಗಿರುತ್ತಾರೆ. ಲಕ್ಷಾಂತರ ಜನರ ಕನಸಿಗೆ ಸ್ಪೂರ್ತಿಯಾಗಲು ಒಲಿಂಪಿಕ್ ಪದಕವೇ ಅಗತ್ಯವಿಲ್ಲ. ವಿನೇಶ್, ನೀವು ಪೀಳಿಗೆಗೆ ಸ್ಪೂರ್ತಿಯಾಗಿದ್ದೀರಿ. ನಿಮ್ಮ ಛಲಕ್ಕೆ ವಂದನೆಗಳು” ಎಂದು ನಾರಂಗ್ ಪೋಸ್ಟ್ ಮಾಡಿದ್ದಾರೆ.