ನವದೆಹಲಿ: ಬಿಜೆಪಿ ಆಡಳಿತದ ಕೇಂದ್ರ ಸರ್ಕಾರದಿಂದ ಸಂವಿಧಾನದ ಮೇಲೆ ದಾಳಿ ನಡೆಯುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ದೇಶಾದ್ಯಂತ 100 ದಿನಗಳ “ಸಂವಿಧಾನ ರಕ್ಷಕ ಅಭಿಯಾನ” ಆರಂಭಿಸಿದೆ.
ಚುನಾವಣೆಗೆ ಮುನ್ನ ಸಂವಿಧಾನ ಬದಲಾಯಿಸಲು ಬಯಸಿದ್ದ ಪಕ್ಷ ಅಧಿಕಾರದಲ್ಲಿರುವ ಕಾರಣ ಸಂವಿಧಾನಕ್ಕೆ ಹಲವು ಸವಾಲುಗಳು ಮತ್ತು ಬೆದರಿಕೆಗಳು ಇದ್ದು ಹೀಗಾಗಿ, ಅದರ ವಿರುದ್ಧ ಅಭಿಯಾನ ನಡೆಸಲು ಕಾಂಗ್ರೆಸ್ ಮುಂದಾಗಿದೆ ಎಂದು ಎಐಸಿಸಿ ಖಜಾಂಚಿ ಅಜಯ್ ಮಾಕನ್, ದೆಹಲಿ ಕಾಂಗ್ರೆಸ್ ಅಧ್ಯಕ್ಷ ದೇವೆಂದರ್ ಯಾದವ್, ಎಐಸಿಸಿ ಎಸ್‌ಸಿ ಮೋರ್ಚಾ ಅಧ್ಯಕ್ಷ ರಾಜೇಶ್ ಲಿಲೋಥಿಯಾ ಅವರು ಆ.16ರಂದು ಈ ಅಭಿಯಾನಕ್ಕೆ ಚಾಲನೆ ನೀಡಿದರು.
ಈ ಬಗ್ಗೆ ಅಜಯ್ ಮಾಕನ್ ಅವರು ಮಾತನಾಡಿ ‘ಭಾರತವು ಬಲಿಷ್ಠ ಸಂವಿಧಾನವನ್ನು ಹೊಂದಿರುವ ಕಾರಣ, ಯಶಸ್ವಿ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಸಾಗುತ್ತಿದೆ. ಆದರೆ ಬಿಜೆಪಿಯಿಂದ ಸಂವಿಧಾನದ ಮೇಲೆ ದಾಳಿ ನಡೆಯುತ್ತಿದೆ. ಸಂವಿಧಾನದ ರಕ್ಷಣೆಗಾಗಿ ಇಲ್ಲಿಯವರೆಗೆ ಮೂರು ಲಕ್ಷ ಸಂವಿಧಾನ ಸಂರಕ್ಷಣಾ ಸ್ವಯಂಸೇವಕರಾಗಿ ನೋಂದಾಯಿಸಿಕೊAಡಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೂ ಕೂಡ ಸಂವಿಧಾನ ರಕ್ಷಣಾ ಸ್ವಯಂಸೇವಕರಾಗಿ ದಾಖಲಿಸಿಕೊಂಡಿದ್ದಾರೆ’ ಎಂದು ತಿಳಿಸಿದ್ದಾರೆ.
“ಸಂವಿಧಾನ ರಕ್ಷಕ ಅಭಿಯಾನ” ಹೇಗಿರುತ್ತೆ?
ಈ ಅಭಿಯಾನವನ್ನು ದೇಶದ ಪ್ರತಿ ಹಳ್ಳಿಗೂ ವಿಸ್ತರಿಸಲಾಗುತ್ತಿದೆ. ಪ್ರತಿ ಗ್ರಾಮದಲ್ಲಿ ಒಬ್ಬ ಪುರುಷ ಮತ್ತು ಒಬ್ಬ ಮಹಿಳೆಯನ್ನು ಸಂವಿಧಾನ ರಕ್ಷಣಾ ಸ್ವಯಂಸೇವಕರನ್ನಾಗಿ ಗುರುತಿಸಿ ತರಬೇತಿ ನೀಡಲಾಗುವುದು. ನವೆಂಬರ್ 26ರಂದು ಸಂವಿಧಾನ ಅಂಗೀಕಾರವಾಗಿ 75ನೇ ವರ್ಷಗಳಾಗುತ್ತಿದ್ದು, ಅಂದೆ ನವದೆಹಲಿಯ ಟಾಲ್ಕಟೋರಾ ಸ್ಟೇಡಿಯಂನಲ್ಲಿ ಈ ಅಭಿಯಾನ ಮುಕ್ತಾಯವಾಗಲಿದೆ.