ದ.ಕ: ತಂತ್ರಜ್ಞರಿಂದ ಸೇತುವೆಗಳ ಪರಿಶೀಲನೆ: ಜಿಲ್ಲೆಯ 10 ಸೇತುವೆಗಳಲ್ಲಿ ಸಂಚಾರ ನಿರ್ಬಂಧ: ಯಾವೆಲ್ಲ ಸೇತುವೆ ಸಂಪೂರ್ಣ ಬಂದ್..?

ಮಂಗಳೂರು : ಕಾರವಾರದ ಕಾಳಿ ಸೇತುವೆ ಮುರಿದ ಬೆನ್ನಲ್ಲೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲೈ ಮುಗಿಲನ್ ನಿರ್ದೇಶನದಂತೆ ಲೋಕೋಪಯೋಗಿ ಇಲಾಖೆ, ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಧಿಕಾರಿಗಳು ಜಿಲ್ಲಾದ್ಯಂತ ಸೇತುವೆಗಳ ಪರಿಶೀಲನೆ ನಡೆಸಿದ್ದಾರೆ. ಈ ವರದಿ ಆಧರಿಸಿ ದಕ್ಷಿಣ ಕನ್ನಡ ಜಿಲ್ಲೆಯ 10 ಸೇತುವೆಗಳಲ್ಲಿ ಸಂಚಾರ ನಿರ್ಬಂಧ ಮಾಡಿ ಆದೇಶ ಹೊರಡಿಸಲಾಗಿದೆ.

ಕೆಲವೊಂದು ಸೇತುವೆಗಳನ್ನು ಅಪಾಯಕಾರಿ ಎಂದು ಗುರುತಿಸಲಾಗಿದ್ದು, ಅವುಗಳಲ್ಲಿ ಸಂಚಾರ ಸಂಪೂರ್ಣ ನಿಷೇಧ ಅಥವಾ ಘನ ವಾಹನ ನಿಷೇಧಿಸಲಾಗಿದೆ. ಇದರಿಂದ ಪರ್ಯಾಯ ರಸ್ತೆಗಾಗಿ ವಾಹನ ಸವಾರರು ಪರದಾಡುವಂತಾಗಿದೆ.

ಪೈಚಾರು-ದಿಡುಪೆ ಸೇತುವೆಯಲ್ಲಿ ವಾಹನಗಳ ಸಂಚಾರ ನಿರ್ಬಂಧ

ಬೆಳ್ತಂಗಡಿ ತಾಲೂಕಿನ ರಾಜ್ಯ ಹೆದ್ದಾರಿ-276ರ ಪೈಚಾರುವಿನಿಂದ-ಮುಂಡಾಜೆ-ದಿಡುಪೆಗೆ ತೆರಳುವ ಸೇತುವೆಗಳಲ್ಲಿ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.

ಅಂಬಡಬೆಟ್ಟು ಸೇತುವೆ ಶಿಥಿಲಾವಸ್ಥೆಯಲ್ಲಿ: ಸಂಚಾರ ಮಾರ್ಗ ಬದಲಾವಣೆ

ನಿಡಿಗಲ್ ಮೂಲಕ ನಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುರಿಪಳ್ಳಕ್ಕೆ ಸಂಪರ್ಕ ಕಲ್ಪಿಸುವ ಉಜಿರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಜಿರೆ-ಇಂದಬೆಟ್ಟು, ಜಿಲ್ಲಾ ಮುಖ್ಯ ರಸ್ತೆಯ ಅಂಬಡಬೆಟ್ಟು ಸೇತುವೆ ಶಿಥಿಲಾವಸ್ಥೆಯಲ್ಲಿದ್ದು ಈ ಕಾರಣದಿಂದ ಸೇತುವೆಯಲ್ಲಿ ಘನ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ಪರ್ಯಾಯವಾಗಿ ಉಜಿರೆ ಜನಾರ್ದನ ಸ್ವಾಮಿ ದೇವಸ್ಥಾನದ ದ್ವಾರದಿಂದ- ಸುರ್ಯ ದೇವಸ್ಥಾನ ಮಾರ್ಗವಾಗಿ- ಕೇಳ್ತಾಜೆ ಮುಖಾಂತರ ಸಂಚರಿಸಲು ತಿಳಿಸಲಾಗಿದೆ.

ಪುತ್ತೂರು-ಪಾಣಾಜೆ ಸಂಚಾರ ಬದಲಾವಣೆ
ಪುತ್ತೂರು-ಪಾಣಾಜೆ ರಸ್ತೆಯ ದೇವಸ್ಯದಿಂದ ಚೆನ್ನ ಮೂಲಕ ಸಂರ್ಪಕ ಕಲ್ಪಿಸುವ ಸೇತುವೆಯು ಎರಡು ದಿನಗಳಿಂದ ಸುರಿದ ಭಾರಿ ಮಳೆ ನೀರಿನಿಂದ ಸಂಪೂರ್ಣ ಮುಳುಗಡೆಯಾಗಿರುವುದರಿಂದ ಮುಂದಿನ ಆದೇಶದವರೆಗೆ ಈ ಸೇತುವೆಯಲ್ಲಿ ಘನ ವಾಹನ ಸಂಚಾರ ನಿರ್ಬಂಧಿಸಲಾಗಿದೆ.

ಈಶ್ವರಮಂಗಲ- ಪಾಂಚೋಡಿ – ಗಾಳಿಮುಖ ರಸ್ತೆ
ಪುತ್ತೂರು ತಾಲೂಕಿನ ಜಿಲ್ಲಾ ಮುಖ್ಯ ರಸ್ತೆ ಕಿ.ಮೀ 13.60 ರ ಕರ್ನೂರು ಕೋಟಿಗದ್ದೆ ಎಂಬಲ್ಲಿ ಹಳೇ ಸೇತುವೆ ಶಿಥಿಲಗೊಂಡ ಕಾರಣ ವಾಹನ ಸಂಚಾರ ನಿಷೇಧಿಸಲಾಗಿದೆ

ಕೂಳೂರು ಸೇತುವೆ ಸಂಚಾರ ನಿಷೇಧ
ಕೂಳೂರಿನ ಹಳೆಯ ಕಮಾನು ಸೇತುವೆಯಲ್ಲಿ ಘನ ವಾಹನಗಳ ಸಂಚಾರ ನಿರ್ಬಂಧಿಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸೂಚಿಸಿತ್ತು. ಈ ಕಾರಣದಿಂದ ಆ. 19 ರಿಂದ ಬಸ್‌ಗಳನ್ನು ಹೊರತುಪಡಿಸಿ ಘನ ವಾಹನ ಸಂಚಾರ ನಿಷೇಧಿಸಲಾಗಿದೆ.

ಅಡ್ಡೂರು ಸೇತುವೆಯಲ್ಲಿ ನೋ ಎಂಟ್ರಿ
ಮಂಗಳೂರು ತಾಲೂಕಿನ ಸುರತ್ಕಲ್ ಕಬಕ ರಾಜ್ಯ ಹೆದ್ದಾರಿಯ ಅಡ್ಡೂರು ಸೇತುವೆ ಶಿಥಿಲಗೊಂಡಿದ್ದು, ಘನವಾಹನ ಸಂಚಾರ ನಿರ್ಬಂಧಿಸಲಾಗಿದೆ.

ಪರಾರಿ ಸೇತುವೆಯಲ್ಲಿ ನಿರ್ಬಂಧ
ಮಂಗಳೂರು ತಾಲೂಕಿನ ಪರಾರಿ- ಉಳಾಯಿಬೆಟ್ಟು- ಮಲ್ಲೂರು ಜಿಲ್ಲಾ ಮುಖ್ಯ ರಸ್ತೆಯ 0.95 ಕಿ.ಮೀ ರಲ್ಲಿ ಸೇತುವೆ ದುಸ್ಥಿತಿಯಲ್ಲಿದ್ದು, ಘನ ವಾಹನಗಳ ಸಂಚಾರ ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.

ದೇರಳಕಟ್ಟೆ ಮುಖ್ಯ ರಸ್ತೆ ನಿರ್ಬಂಧ
ದೇರಳಕಟ್ಟೆ ಬರುವ ಜಿಲ್ಲಾ ಮುಖ್ಯ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಪಾಯಕಾರಿಯಾಗಿರುವುದರಿಂದ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.

ದಾಮಸ್‌ಕಟ್ಟೆ-ಬಳ್ಕುಂಜೆ ರಸ್ತೆ
ದಾಮಸ್‌ಕಟ್ಟೆ – ಬಳ್ಳುಂಜೆ ಜಿಲ್ಲಾ ಮುಖ್ಯ ರಸ್ತೆಯ ಪಲಿಮಾರ್ ಗ್ರಾಮದ ಸಮುದ್ರದ ಹಿನ್ನೀರಿನ ಪ್ರದೇಶದ ಸೇತುವೆ ದುಸ್ಥಿತಿಯಲ್ಲಿದ್ದು, ಈ ಸೇತುವೆಯಲ್ಲಿ ಘನ ವಾಹನ ಸಂಚಾರ ನಿಷೇಧಿಸಲಾಗಿದೆ.

ಮರವೂರಿನ ಹಳೆ ಸೇತುವೆಯ ಎರಡನೇ ಪಿಲ್ಲರ್‌ ಶಿಥಿಲಾವಸ್ಥೆಯಲ್ಲಿರುವುದಾಗಿ ಲೋಕೋಪಯೋಗಿ ಇಲಾಖೆಯ ಎಂಜಿನಿಯರ್‌ಗಳು ಮಾಹಿತಿ ನೀಡಿದ ಕಾರಣ ಸೇತುವೆಯಲ್ಲಿ ವಾಹನ ಸಂಚಾರ ನಿಷೇಧಿಸಿ ಆದೇಶಿಸಿಲಾಗಿದೆ.

ಮಂಗಳೂರು- ಅತ್ರಾಡಿ ರಾಜ್ಯ ಹೆದ್ದಾರಿ – 67 ರಸ್ತೆಯ ಬಜಪೆ- ಕಟೀಲು ಸಂಪರ್ಕಿಸುವ ಮರವೂರು ಹಳೇ ಸೇತುವೆ ಅಪಾಯದಲ್ಲಿದ್ದು, ರಸ್ತೆಯ ಒಂದು ಭಾಗದಲ್ಲಿ ಸಂಚಾರ ನಿಷೇಧಿಸಲಾಗಿದೆ.

error: Content is protected !!