ಬೆಂಗಳೂರು: ನಮ್ಮ ಪರಿಸರ ಅಸಮತೋಲನದ ಗಂಭೀರ ಸಮಸ್ಯೆ ಎದುರಿಸುತ್ತಿದೆ, ಹೀಗಾಗಿ ‘ಅಮ್ಮನ ಹೆಸರಲ್ಲಿ ಒಂದು ಮರ’ ಅಭಿಯಾನದಲ್ಲಿ ಗಿಡಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆಯ ಮಹತ್ವದ ಕೆಲಸ ಮಾಡಬೇಕು ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿದ್ದಾರೆ.
78ನೇ ಸ್ವಾತಂತ್ರ‍್ಯೋತ್ಸವದ ಅಂಗವಾಗಿ ರಾಜಭವನದಲ್ಲಿನ ಮಹಾತ್ಮ ಗಾಂಧೀಜಿ ಮತ್ತು ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ಅವರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿ, ಬಳಿಕ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಪರಿಸರವನ್ನು ರಕ್ಷಿಸುವ ಮತ್ತು ಸುಧಾರಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ನಮ್ಮ, ದೇಶ ಸೇರಿದಂತೆ ಜಗತ್ತು ಪರಿಸರ ಅಸಮತೋಲನದಲ್ಲಿದೆ. ಅಮ್ಮನ ಹೆಸರಲ್ಲಿ ಒಂದು ಮರ ಅಭಿಯಾನ ಮೂಲಕ ಗಿಡ ನೆಟ್ಟು ಪರಿಸರ ಸಂರಕ್ಷಣೆ ಮಾಡಬೇಕು. ದೇಶದ ಆರ್ಥಿಕತೆಯನ್ನು ಬಲಪಡಿಸುವ ಜೊತೆಗೆ ಪರಿಸರವನ್ನು ಸಂರಕ್ಷಿಸಲು ನಾವೆಲ್ಲರೂ ಪ್ರತಿಜ್ಞೆ ಮಾಡೋಣ ಎಂದು ರಾಜ್ಯಪಾಲರು ಕರೆ ನೀಡಿದರು.