ಮಂಗಳೂರು: ಬೋಳಿಯಾರ್‌ನಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿ ವಿಧಾನಸಭೆ ಸ್ಪೀಕರ್ ಯುಟಿ ಖಾದರ್ ಪ್ರತಿಕ್ರಿಯಿಸಿದ್ದಾರೆ.
‘ಬೋಳಿಯಾರ್ ಊರಿನ ಜನರು ಪ್ರೀತಿ, ಸೌಹಾರ್ದದಿಂದ ಇದ್ದಾರೆ. ಹೊರಗಿನವರು ಇಲ್ಲಿ ಬಂದು ವಾತಾವರಣ ಕೆಡಿಸಬೇಡಿ ಈ ಪ್ರಕರಣವನ್ನು ದೊಡ್ಡದು ಮಾಡುವವರೇ ದೇಶದ್ರೋಹಿಗಳು. ಬೋಳಿಯಾರ್ ಎಂಬುದು ಸಹೋದರತೆ ಇರುವ ಊರು. ಕೆಲವೇ ಕೆಲವು ಯುವಕರಿಂದ ಅಲ್ಲಿ ಕೆಟ್ಟ ಹೆಸರು ಬಂದಿದೆ. ಅದನ್ನು ಅಲ್ಲಿನವರು, ಊರಿನವರೇ ಸರಿಪಡಿಸುವ ಕೆಲಸ ಮಾಡುತ್ತಿದ್ದಾರೆ. ದಯವಿಟ್ಟು ಹೊರಗಿನವರು ಯಾರೂ ಶಾಂತಿ ಕೆಡಿಸಬೇಡಿ. ಹೊರಗಿನವರು ಬಾಯಿ ಮುಚ್ಚಿ ಕೂರುವುದೇ ದೇಶ ಪ್ರೇಮ. ಹೊರಗಿನ ಎಲ್ಲರೂ ಅಲ್ಲಿ ಮೂಗು ತೂರಿಸುವ ಕೆಲಸ ಬಿಟ್ಟು ಬಿಡಿ’ ಎಂದಿದ್ದಾರೆ.
“‘ಭಾರತ್ ಮಾತಾ ಕೀ ಜೈ’ ಅಂತ ಎಲ್ಲಾ ದೇಶಭಕ್ತರು ಎಲ್ಲೂ ಹೇಳಬಹುದು. ಆದರೆ ಅಲ್ಲಿ ಬೇರೆ ಏನು ಅವಾಚ್ಯ ಶಬ್ದ ಬಳಸಿ ಬೈದಿದ್ದಾರೆ ಎಂಬುದು ಯಾರಿಗೂ ಗೊತ್ತಿಲ್ಲ. ಅಲ್ಲಿ ರಾಜಕೀಯ ಮಾಡಿದ್ರೆ ಯಾರಿಗೂ ಒಂದು ಓಟ್ ಹೆಚ್ಚಾಗಲ್ಲ. ಯಾವುದೇ ಪಕ್ಷಕ್ಕೂ ಅಲ್ಲಿ ಓಟ್ ಹೆಚ್ಚಾಗಲ್ಲ. ಎರಡು ಪಕ್ಷಗಳು ಸೇರಿ ನನ್ನನ್ನು ಚುನಾವಣೆಯಲ್ಲಿ ಸೋಲಿಸಲು ಪ್ರಯತ್ನಪಟ್ಟರು. ಅವರು ಯಾರು ಎಂಬುದು ಎಲ್ಲರಿಗೂ ಗೊತ್ತಿದೆ. ನಾನೀಗ ಸ್ಪೀಕರ್, ಹಾಗಾಗಿ ಯಾವುದೇ ಪಕ್ಷದ ಹೆಸರು ಹೇಳಲ್ಲ. ಅಲ್ಲಿ ವಾಸ್ತವದಲ್ಲಿ ಏನಾಗಿದೆ ಎಂಬುದು ಸ್ಥಳದಲ್ಲಿ ಇದ್ದವರಿಗೆ, ಸ್ಥಳೀಯರಿಗೆ ಮಾತ್ರ ಗೊತ್ತಿದೆ. ಮೂರನೇ ವ್ಯಕ್ತಿಗಳಾಗಿ ನಾವು ನಿರ್ಣಯಕ್ಕೆ ಬರುವುದು ಸರಿಯಲ್ಲ. ಪೊಲೀಸರಿಗೆ ಕೆಲಸ ಮಾಡಲು ಬಿಡಿ, ಅವರು ಎಲ್ಲವನ್ನೂ ಸರಿ ಮಾಡುತ್ತಾರೆ” ಎಂದರು.