ಬೆಳ್ತಂಗಡಿ : ಪಿಲಿಗೂಡಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕರು, ಹಾಗೂ ಉದ್ಯಮಿ ಮೋಹನ್ ಕುಮಾರ್ ಅವರು ಇಂದು ಮಿಕ್ಸಿ ಹಾಗೂ ಗ್ಯಾಸ್ ಸಿಲಿಂಡರ್ ನೀಡಿದ್ದಾರೆ.
ಪಿಲಿಗೂಡಿನ ಸರಕಾರಿ ಶಾಲೆಯಲ್ಲಿ ಜೂ.05ರ ರಾತ್ರಿ ಕಳ್ಳತನ ನಡೆದಿದ್ದು, ಖದೀಮರು ಶಾಲೆಯ ಬೀಗ ಒಡೆದು ಮಿಕ್ಸಿ, ಗ್ಯಾಸ್ ಸಿಲಿಂಡರ್ ದೋಚಿದ್ದಾರೆ. ಹೀಗಾಗಿ ಶಾಲೆಯಲ್ಲಿ ಮಕ್ಕಳಿಗೆ ಬಿಸಿಯೂಟ ತಯಾರಿಸಲು ಸಮಸ್ಯೆಯುಂಟಾಗಿತ್ತು. ಈ ಬಗ್ಗೆ ಪ್ರಜಾಪ್ರಕಾಶ ನ್ಯೂಸ್ ಬಿತ್ತರಿಸಿದ್ದ ವರದಿಯ ಮೂಲಕ ಪತ್ರಕರ್ತ ಪ್ರಸಾದ್ ಶೆಟ್ಟಿ ಅವರ ವಿನಂತಿಯಂತೆ ಉದ್ಯಮಿ ಮೋಹನ್ ಕುಮಾರ್ ಅವರು ತಕ್ಷಣ ಶಾಲೆಗೆ ಮಿಕ್ಸಿ ಹಾಗೂ ಗ್ಯಾಸ್ ಸಿಲಿಂಡರ್ ನೀಡುವ ಭರವಸೆ ನೀಡಿದ್ದರು. ಅದರಂತೆ ಇಂದು ಶಾಲೆಗೆ ತೆರಳಿ ಎಸ್ ಡಿ ಎಂ ಸಿ ಅಧ್ಯಕ್ಷರ, ಶಿಕ್ಷಕರ, ಮಕ್ಕಳ ಸಮ್ಮುಖದಲ್ಲಿ ಶಾಲೆಗೆ ಮಿಕ್ಸರ್ ಗ್ರೈಂಡರ್ ಹಾಗೂ ಗ್ಯಾಸ್ ಸಿಲಿಂಡರ್ ಹಸ್ತಾಂತರಿಸಿ ಮಾತನಾಡಿದ ಅವರು
ಪಿಲಿಗೂಡು ಶಾಲೆಯಲ್ಲಿ ಕಳ್ಳತನವಾದ ವಿಚಾರ ತಿಳಿದು ಬೇಸರವಾಯಿತು. ಮಕ್ಕಳು ಹಸಿವಲ್ಲಿರಬಾರದು ಈ ನಿಟ್ಟಿನಲ್ಲಿ ಗ್ಯಾಸ್ ಸಿಲಿಂಡರ್ ಮತ್ತು ಮಿಕ್ಸಿ ನೀಡಲಾಗಿದೆ. ಗ್ರಾಮೀಣ ಭಾಗದ ಸರಕಾರಿ ಶಾಲೆಗೆ ತೊಂದರೆಯಾದರೆ ಕೂಡಲೆ ಸ್ಪಂದಿಸುತ್ತೇನೆ. ಶಾಲೆಯಿಂದ ಯಾರು ಕಳ್ಳತನ ಮಾಡಿದ್ದಾರೋ ಆ ವ್ಯಕ್ತಿಗಳು ಒಂದು ಕ್ಷಣ ಕೂತು ಯೋಚಿಸಿದರೆ ಅವರಿಗೆ ತಮ್ಮ ತಪ್ಪಿನ ಅರಿವಾಗಬಹುದು. ದೇವರು ಅವರಿಗೆ ಮುಂದೆ ಇಂತಹ ಕೆಲಸ ಮಾಡದಂತೆ ಬುದ್ದಿ ಕೊಡಲಿ.
ಶಾಲೆಯಲ್ಲಿ ಯಾರೂ ಕಳ್ಳತನ ಮಾಡಬಾರದು. ಬಡ ಮಕ್ಕಳ ಹಸಿದ ಹೊಟ್ಟೆಗೆ ಪೆಟ್ಟು ಕೊಡುವ ಕೆಲಸ ಮಾಡಬೇಡಿ, ಮುಂದೆ ಇಂತಹ ಘಟನೆ ಆಗದಿರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಮುಂದಿನ ದಿನಗಳಲ್ಲಿ ಈ ಶಾಲೆಗೆ ಭೇಟಿ ಕೊಟ್ಟು ಮಕ್ಕಳ ಜೊತೆ ಇರುತ್ತೇನೆ. ಮುಂದಿನ ವರ್ಷ ಈ ಶಾಲಾ ಮಕ್ಕಳಿಗೆ ಯಾವ ರೀತಿಯ ನೆರವು ಬೇಕು ಅದನ್ನು ನೀಡಲು ನಾವು ಮುಂದಾಗುತ್ತೇವೆ ಎಂದಿದ್ದಾರೆ.ಪತ್ರಕರ್ತ ಪ್ರಸಾದ್ ಶೆಟ್ಟಿ ಎಣಿಂಜೆ ಮಾತನಾಡಿ ಘಟನೆಯ ಬಗ್ಗೆ ನಾವು ಸುದ್ದಿ ಬಿತ್ತರಿಸಿದ್ದ ಕೂಡಲೆ ಉದ್ಯಮಿ ಮೋಹನ್ ಕುಮಾರ್ ಅವರು ಮೊದಲು ಕೇಳಿದ್ದು ‘ಮಕ್ಕಳಿಗೆ ಊಟಕ್ಕೆ ಏನ್ ಮಾಡ್ತಾರೆ’ ಎಂದು. ಬಳಿಕ ಆ ಕ್ಷಣವೇ ಅವರು ‘ಶಾಲೆಗೆ ಮಿಕ್ಸಿ ಹಾಗೂ ಗ್ಯಾಸ್ ಹಂಡೆ ನಾನು ಕೊಡುತ್ತೇನೆ’ ಎಂದಿದ್ದಾರೆ.
ಮೋಹನ್ ಕುಮಾರ್ ಅವರು ಈಗಾಗಲೆ 4 ಸರಕಾರಿ ಶಾಲೆಗಳನ್ನು ದತ್ತು ಪಡೆದುಕೊಂಡು ಶಾಲೆಯನ್ನು ಅಭಿವೃದ್ಧಿ ಪಡಿಸಿದ್ದಾರೆ. ಅವರ ಸೇವಾ ಮನೋಭಾವ ಇನ್ನಷ್ಟು ಜನರಿಗೆ ತಿಳಿದು ಸ್ಪೂರ್ತಿಯಾಗಬೇಕು. ದಾನಿಗಳು ಕೈ ಜೋಡಿಸಬೇಕು. ಬಾಲ್ಯದಲ್ಲಿ ಮೋಹನ್ ಅವರು ಅನುಭವಿಸಿದ ಹಸಿವಿನ ನೋವು ಮತು ಬಡತನ ಇವತ್ತಿನ ಸರಕಾರಿ ಮಕ್ಕಳು ಅನುಭವಿಸಬಾರದು ಎಂಬ ಕಾಳಜಿ ಅವರದ್ದು. ಹಾಗಾಗಿ ಶಾಲೆಯ ಸಮಸ್ಯೆಗೆ ಸ್ಪಂದಿಸಿ ಅತ್ಯುತ್ತಮ ಕಂಪನಿಯ ಉತ್ತಮ ಮಿಕ್ಸಿಯನ್ನು ನೀಡಿದ್ದಾರೆ. ಅವರಿಗೆ ತುಂಬು ಹೃದಯದ ಧನ್ಯವಾದ ಎಂದಿದ್ದಾರೆ.
ಶಾಲಾ ಮುಖ್ಯೋಪಾಧ್ಯಾಯಿನಿ ಪ್ಲೇವಿಯ ಡಿಸೋಜ ಮಾತನಾಡಿ ಜೂ.06 ನಮಗೆ ಕೆಟ್ಟ ದಿನವಾಗಿತ್ತು. ಶಾಲೆಯಲ್ಲಿ ಕಳ್ಳತನವಾಗಿದ್ದು ತುಂಬಾ ಬೇಸರವಾಯಿತು. ಕಳವಾಗಿದ್ದ ಮಿಕ್ಸಿಯನ್ನು ನಾವು ದಾನಿಗಳಿಂದಲೇ ಪಡೆದುಕೊಂಡಿದ್ದೆವು. ಆದರೆ ಅದನ್ನೂ ಕಳ್ಳರು ಕದ್ದಿದ್ದಾರೆ. ಶಾಲೆಯಲ್ಲಿ ಕಳವಾದ ವಸ್ತುಗಳನ್ನು ಮತ್ತೆ ಪಡೆಯಲು ನಾವು ದಾನಿಗಳ ಬಳಿ ಬೇಡಿಕೊಳ್ಳಬೇಕಿತ್ತು. ಆದರೆ ಮೋಹನ್ ಕುಮಾರ್ ಅವರನ್ನು ದೇವರೇ ಕಳಿಸಿದ್ದು, ನಮಗೆ ಬೇಡಿಕೊಳ್ಳುವ ಕೆಲಸ ಇಲ್ಲ. ಲೀಲಾವತಿ ಟೀಚರ್ ಅನೇಕ ದಾನಿಗಳಿಗೆ ಈ ಶಾಲೆಯನ್ನು ಪರಿಚಯಿಸಿದ್ದಾರೆ. ಆದರೆ ನಾವು ಅವರನ್ನು ಕಳೆದುಕೊಂಡೆವು. ಇವತ್ತು ಮಾದ್ಯಮದವರಿಂದ ನಮಗೆ ಉಪಕಾರವಾಗಿದೆ. ಮಾದ್ಯಮದಲ್ಲಿ ಕೆಟ್ಟ ವಿಚಾರಗಳೇ ಪ್ರಸಾರವಾಗುತ್ತದೆ. ಆದರೆ ಇಂತಹ ಸುದ್ದಿಗಳು ಬಿತ್ತರವಾದರೆ ಅದರ ಪ್ರಯೋಜನ ಹೇಗಿರುತ್ತೆ ಅನ್ನೋದನ್ನು ನಾವು ಇವತ್ತು ನೋಡಿದ್ದೇವೆ. ಸಮಾಜದಲ್ಲಿ ತುಂಬಾ ಶ್ರೀಮಂತರಿದ್ದಾರೆ. ಆದರೆ ಇಂತಹ ದಾನದ ಮನಸ್ಸು ಎಲ್ಲರಿಗೂ ಇರೋದಿಲ್ಲ. ಶಾಲೆಗೆ ಮಿಕ್ಸಿ, ಗ್ಯಾಸ್ ಹಂಡೆ ನೀಡಿ ನೆರವಾದ ಉದ್ಯಮಿ ಮೋಹನ್ ಕುಮಾರ್ ಅವರಿಗೆ, ಮಾದ್ಯಮದವರಿಗೆ ತುಂಬು ಹೃದಯದ ಧನ್ಯವಾದ ಎಂದಿದ್ದಾರೆ.ಕಾರ್ಯಕ್ತಮದಲ್ಲಿ ಶಿ ಕ್ಷಕಿಯರಾದ ಚಂದ್ರಾ.ಕೆ, ಶಿಲ್ಪಾ, ಉಷಾ , ಎಸ್.ಡಿ.ಎಮ್.ಸಿ ಅಧ್ಯಕ್ಷ ಇಸ್ಮಾಯಿಲ್ , ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಭುವನೇಶ್, ಎಸ್.ಡಿ.ಎಮ್.ಸಿ ಸದಸ್ಯರಾದ ಬಾಲಕೃಷ್ಣ, ವನಿತಾ,ಹಾಗೂ ಪೋಷಕರು ಉಪಸ್ಥಿತರಿದ್ದರು.
ಇದನ್ನೂ ಓದಿ: