ಕೇರಳದಲ್ಲಿ ಹೆಚ್ಚಾದ ವೆಸ್ಟ್ ನೈಲ್ ಜ್ವರ: ಮೈಸೂರಿನಲ್ಲಿ ಆತಂಕ: ಕೋವಿಡ್, ಹಂದಿಜ್ವರ, ನಿಫಾ ವೈರಸ್ ಮಧ್ಯೆ ಏನಿದು ವೆಸ್ಟ್ ನೈಲ್?

ಮೈಸೂರು: ದೇಶಾದ್ಯಂತ ಕೊರೋನಾ ಬಳಿಕ ಜನ ವೈರಸ್ ಎಂದರೆ ಭಯಪಡುವಂತಾಗಿದೆ. ಹೊಸ ಹೊಸ ರೂಪದಲ್ಲಿ ಬರುತ್ತಿರುವ ವೈರಸ್ ಗಳ ಹೆಸರು ಕೇಳಿದರೆ ಆ ಭಯಕ್ಕೆ ಜ್ವರ ಶುರುವಾಗುವಂತಿದೆ. ಇದೀಗ ಕೇರಳದಲ್ಲಿ ವೆಸ್ಟ್ ನೈಲ್ ಜ್ವರ ಕಾಣಿಸಿಕೊಂಡಿದ್ದು ಗಡಿಭಾಗದಲ್ಲಿ ಮುನ್ನೆಚ್ಚರಿಕೆ ವಹಿಸಿಕೊಳ್ಳಲಾಗಿದೆ.

ನೆರೆಯ ಕೇರಳದಲ್ಲಿ ವೆಸ್ಟ್ ನೈಲ್ ಜ್ವರ ಪ್ರಕರಣಗಳು ಹೆಚ್ಚೆಚ್ಚು ವರದಿಯಾಗುತ್ತಿದ್ದು. ಆ ರಾಜ್ಯದ ಜತೆ ಗಡಿ ಹಂಚಿಕೊಂಡಿರುವ ಮೈಸೂರಿನಲ್ಲಿ ಆತಂಕ ಹೆಚ್ಚಾಗಿದೆ. ಹೀಗಾಗಿ ಜಿಲ್ಲೆಯ ಗಡಿಭಾಗದಲ್ಲಿ ಕಟ್ಟೆಚ್ಚರ ಘೋಷಿಸಲಾಗಿದ್ದು , ಕೇರಳಕ್ಕೆ ಭೇಟಿ ನೀಡಿ ಮೈಸೂರಿಗೆ ವಾಪಸ್ಸಾಗುವವರ ಬಗ್ಗೆ ನಿಗಾ ಇಡಲಾಗುತ್ತಿದೆ. ವೆಸ್ಟ್ ನೈಲ್ ಜ್ವರದ ಬಗ್ಗೆ ಎಚ್‌ಡಿ ಕೋಟೆ ತಾಲೂಕು ಆರೋಗ್ಯಾಧಿಕಾರಿಗಳಿಂದ ಜನ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.

ಏನಿದು ವೆಸ್ಟ್ ನೈಲ್ ಜ್ವರ?

ಡೆಂಗ್ಯೂ, ಮಲೇರಿಯಾ, ಚಿಕನ್ ಗುನ್ಯ, ಕೋವಿಡ್, ಹಂದಿಜ್ವರ, ನಿಫಾ ವೈರಸ್ ಮಧ್ಯೆ ವೆಸ್ಟ್ ನೈಲ್ ಜ್ವರ ಕಾಣಿಸಿಕೊಂಡು ಆತಂಕ ಹೆಚ್ಚಿಸಿದೆ. ಆದರೆ ಅಷ್ಟೇನೂ ಭಯ ಪಡುವ ವೈರಸ್ ಜ್ವರ ಇದಲ್ಲ. ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆ ಕೇಂದ್ರವು ನೀಡಿರುವ ಮಾಹಿತಿಯ ಪ್ರಕಾರ ವೆಸ್ಟ್ ನೈಲ್ ಜ್ವರ ಎಂದರೆ, ಸೊಳ್ಳೆಗಳ ಕಡಿತದ ಮೂಲಕ ಹರಡುವ ವೈರಸ್ ಸೋಂಕಾಗಿದೆ. ಅಧಿಕ ಜ್ವರ, ತಲೆನೋವು, ಕುತ್ತಿಗೆ ಬಿಗಿತ, ನಡುಕ, ಸೆಳೆತ, ಸ್ನಾಯು ದೌರ್ಬಲ್ಯ, ದೃಷ್ಟಿ ನಷ್ಟ, ನರಗಳಲ್ಲಿ ಮರಗಟ್ಟುವಿಕೆ ಅನುಭವವಾಗುವುದು ವೆಸ್ಟ್ ನೈಲ್ ಸೋಂಕಿನ ಪ್ರಮುಖ ಲಕ್ಷಣಗಳಾಗಿವೆ.

ಸೋಂಕಿತರು ಕೆಲವೊಂದು ಸಂದರ್ಭದಲ್ಲಿ ಕೋಮಾಗೆ ಜಾರುವ ಅಥವಾ ಪಾರ್ಶ್ವವಾಯುವಿಗೆ ತುತ್ತಾಗುವ ಅಪಾಯವೂ ಇದೆ. ಹೆಚ್ಚಿನ ಸೋಂಕಿತರಲ್ಲಿ ಕೆಲವೊಮ್ಮೆ ರೋಗ ಲಕ್ಷಣಗಳು ಕಂಡುಬರದೇ ಇರುವ ಸಾಧ್ಯತೆಯೂ ಇದೆ. ಇದಕ್ಕೆ ಹೊಸ ಔಷಧ ಕಂಡು ಹಿಡಿಯುವ ಅವಶ್ಯಕತೆ ಇಲ್ಲ. ಬದಲಾಗಿದೆ, ಇತರೆ ವೈರಸ್ ಸೋಂಕುಗಳಿಗೆ ನೀಡುವಂತೆ ರೋಗದ ಲಕ್ಷಣಗಳನ್ನು ಆಧರಿಸಿ ಚಿಕಿತ್ಸೆ ನೀಡಲಾಗುತ್ತದೆ. ಅನಿವಾರ್ಯ ಸಂದರ್ಭಗಳಲ್ಲಿ ರೋಗಿಯನ್ನು ಆಸ್ಪತ್ರೆಗೆ ದಾಖಲಿಸಿಕೊಂಡು ಚಿಕಿತ್ಸೆ ನೀಡಬೇಕಾಗುತ್ತದೆ ಎಂದು ತಜ್ಞ ವೈದ್ಯರು ತಿಳಿಸಿದ್ದಾರೆ.
ಮನೆಯ ಸುತ್ತಮುತ್ತ ಸ್ವಚ್ಛವಾಗಿದ್ದರೆ ಈ ಸೋಂಕಿನಿಂದ ಪಾರಾಗಬಹುದು.

error: Content is protected !!