ಕುಸಿದು ಬಿದ್ದ ಬಾಲಕ: ನಿಂತೇ ಬಿಟ್ಟಿತು ಹೃದಯ!: ರಸ್ತೆಯಲ್ಲೇ ಸಿಪಿಆರ್ ನೀಡಿ ಬದುಕಿಸಿದ ವೈದ್ಯೆ

ವಿಜಯವಾಡ : ಕುಸಿದು ಬಿದ್ದ ಬಾಲಕನನ್ನು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ರಸ್ತೆ ಮಧ್ಯೆಯೆ ಆತನನ್ನು ಮಲಗಿಸಿ ವೈದ್ಯೆಯೊಬ್ಬರು ಪ್ರಾಣ ಕಾಪಾಡಿದ ಘಟನೆ ವಿಜಯವಾಡದಲ್ಲಿ ನಡೆದಿದೆ.


6 ವರ್ಷದ ಬಾಲಕ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ವಿದ್ಯುತ್ ಸ್ಪರ್ಶಿಸಿ ನೆಲಕ್ಕೆ ಕುಸಿದು ಬಿದ್ದಿದ್ದು ಆ ಕ್ಷಣಕ್ಕೆ ಆತನ ಹೃದಯ ಬಡಿತ ಸ್ತಬ್ಧವಾಗಿತ್ತು. ಎದ್ದೇಳುವಂತೆ ಎಷ್ಟೇ ಗೋಗರೆದರು ಪ್ರತಿಕ್ರಿಯೆ ನೀಡದ ಬಾಲಕನನ್ನು ತಕ್ಷಣ ಪೋಷಕರು ಹೆಗಲ ಮೇಲೆ ಹೊತ್ತುಕೊಂಡು ಆಸ್ಪತ್ರೆಯತ್ತ ಓಡಿದರು. ಈ ವೇಳೆ ಅದೇ ರಸ್ತೆಯಲ್ಲಿ ಸಾಗುತ್ತಿದ್ದ ಮೆಡ್ಸಿ ಆಸ್ಪತ್ರೆಯ ಪ್ರಸೂತಿ ತಜ್ಞರಾದ ಡಾ.ನನ್ನಪನೇನಿ ರವಳಿ ಅವರು ಈ ದೃಶ್ಯ ಗಮನಿಸಿದ್ದು ಪೋಷಕರನ್ನು ತಡೆದು ಅವರಿಗೆ ಧೈರ್ಯ ನೀಡಿ ರಸ್ತೆಯ ಮಧ್ಯೆದಲ್ಲೇ ಬಾಲಕನನ್ನು ಪರೀಕ್ಷಿಸಿ ಸಿಪಿಆರ್ ಅನ್ನು ಪ್ರಾರಂಭಿಸಿದರು.

ಡಾಕ್ಟರ್ ಬಾಲಕನ ಎದೆಯ ಮೇಲೆ ಕೈ ಒತ್ತಲು ಆರಂಭಿಸಿದ್ದು, ಮತ್ತೊಬ್ಬನಿಗೆ ಬಾಯಿಗೆ ಬಾಯಿಟ್ಟು ಗಾಳಿ ಊದುವಂತೆ ಸೂಚಿಸಿದರು. ಏಳು ನಿಮಿಷಕ್ಕೂ ಹೆಚ್ಚು ಕಾಲ ಸಿಪಿಆರ್ ಮಾಡಿದರು. ಬಳಿಕ ಹುಡುಗನ ಹೃದಯ ಬಡಿಯಲು ಆರಂಭಿಸಿತು, ಕೈಕಾಲುಗಳು ಆಡಲಾರಂಭಿಸಿದವು. ಆತಂಕದಲ್ಲಿದ್ದ ಪೋಷಕರ ಮುಖದಲ್ಲಿ ಸಂತಸ ಅರಳಿತು. ನಂತರ ಬಾಲಕನನ್ನು ಬೈಕ್‌ನಲ್ಲಿ ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಈ ವೇಳೆ ವೈದ್ಯೆ ಡಾ.ನನ್ನಪನೇನಿ ರವಳಿ ಅವರು ಹುಡುಗನಿಗೆ ಸರಿಯಾಗಿ ಉಸಿರಾಡಲು, ತಲೆಯನ್ನು ಸ್ವಲ್ಪ ಬಾಗಿಸಲು ಸಲಹೆ ನೀಡಿದರು. ಬಾಲಕ ಆಸ್ಪತ್ರೆಗೆ ತೆರಳಿದ ಕೂಡಲೇ ಚಿಕಿತ್ಸೆ ನೀಡಲಾಗಿದೆ.

ತುರ್ತು ಪರಿಸ್ಥಿತಿಯಲ್ಲಿ ಸಿಪಿಆರ್ ಎಷ್ಟು ಉಪಯುಕ್ತವಾಗಿದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಮಗುವಿನ ಪ್ರಾಣ ಉಳಿಸಿದ ಡಾ.ನನ್ನಪನೇನಿ ರವಳಿ ಅವರಿಗೆ ಅನೇಕರಿಂದ ಪ್ರಶಂಸೆ ಲಭಿಸಿದೆ.

error: Content is protected !!