ಬೆಳಗಾವಿ: 4 ತಿಂಗಳ ಹಿಂದೆ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ಮಾಡಿ, ಮೆರವಣಿಗೆ ಮಾಡಿದ ಆರೋಪಿಗಳನ್ನು ಹೈಕೋರ್ಟ್ ಬಿಡುಗಡೆಗೊಳಿಸಿದ್ದು, ಆರೋಪಿಗಳಿಗೆ ಹೂವಿನ ಹಾರ ಹಾಕಿ, ಸಿಹಿ ತಿನ್ನಿಸಿ ಅದ್ಧೂರಿಯಾಗಿ ಸ್ವಾಗತ ಮಾಡಿರುವ ನಾಚಿಕೆಗೇಡಿನ ಘಟನೆ ಬೆಳಗಾವಿಯ ವಂಟಮೂರಿ ಗ್ರಾಮದಲ್ಲಿ ನಡೆದಿದೆ.
ದುಂಡಪ್ಪ ಅಶೋಕ ನಾಯಕ್ ಎಂಬ ವಂಟಮೂರಿ ಗ್ರಾಮದ ಯುವಕ ಹಾಗೂ ಪ್ರಿಯಾಂಕಾ ಬಸಪ್ಪ ನಾಯಕ್ ಎಂಬ ಯುವತಿ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಯುವತಿಯ ಪೋಷಕರು ಇವರ ಪ್ರೀತಿಯನ್ನು ತಿರಸ್ಕರಿಸಿ ಯುವತಿಗೆ ಬೇರೊಬ್ಬರ ಜೊತೆ ಯಾದಿ ಮೇ ಶಾದಿ ಮಾಡಲು ನಿರ್ಧರಿಸಿದ್ದರು. ಈ ವಿಚಾರ ತಿಳಿದು ಯುವತಿ ಹಾಗೂ ಯುವಕ ನಿಶ್ಚಿತಾರ್ಥದ ಹಿಂದಿನ ದಿನ ಪರಾರಿ ಆಗಿದ್ದರು. ಮಗಳು ಯುವಕನ ಜೊತೆ ಓಡಿ ಹೋದ ವಿಚಾರ ತಿಳಿಯುತ್ತಿದ್ದಂತೆ ಯುವತಿಯ ಕುಟುಂಬಸ್ಥರು ಯುವಕನ ಮನೆಗೆ ನುಗ್ಗಿ ಮಲಗಿದ್ದ ದುಂಡಪ್ಪನ ತಾಯಿ ಕಮಲವ್ವಳನ್ನು ಹೊರಗೆ ಎಳೆದುಕೊಂಡು ಬಂದು ದೌರ್ಜನ್ಯವೆಸಗಿದ್ದರು. ಅಲ್ಲದೆ ಈ ಮಹಿಳೆಯನ್ನು ಯುವತಿಯ ಕಡೆಯವರು ಬೆತ್ತಲೆಗೊಳಿಸಿ ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಿ ಬಳಿಕ ಮೆರವಣಿಗೆ ಮಾಡಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಕತಿ ಠಾಣೆ ಪೊಲೀಸರು 13 ಆರೋಪಿಗಳನ್ನ ಬಂಧಿಸಿ, ಹಿಂಡಲಗಾ ಜೈಲಿನಲ್ಲಿ ಇರಿಸಿದ್ದರು. ಇದೀಗ ಹೈಕೋರ್ಟ್ ಎಲ್ಲ ಆರೋಪಿಗಳಿಗೆ ಷರತ್ತುಬದ್ಧ ಜಾಮೀನು ನೀಡಿದೆ. ಹೀಗಾಗಿ ಆರೋಪಿಗಳು ಏ.22 ರಾತ್ರಿ ಜೈಲಿನಿಂದ ಬಿಡುಗಡೆಯಾದರು. ಈ ವೇಳೆ ಜೈಲಿನ ಎದುರೇ ಪ್ರಮುಖ ಆರೋಪಿ ಬಸಪ್ಪ ನಾಯ್ಕ್ಗೆ ಹೂಮಾಲೆ ಹಾಕಿ, ಸಿಹಿ ತಿನಿಸಿ ಸ್ವಾಗತಿಸಲಾಯಿತು. ಅಲ್ಲದೇ ಆರೋಪಿಗಳನ್ನು ವಂಟಮೂರಿ ಗ್ರಾಮದಲ್ಲಿ ಮೆರವಣಿಗೆ ಮಾಡಲು ಆರೋಪಿಯ ಬೆಂಬಲಿಗರು ಮುಂದಾಗಿದ್ದರು. ಆದರೆ ಪೊಲೀಸರು ಮೆರವಣಿಗೆಗೆ ತಡೆ ನೀಡಿದ್ದಾರೆ. ಹೀಗಾಗಿ ಆರೋಪಿಗಳ ಸಹಚರರು ಪಟಾಕಿ ಸಿಡಿಸಿ ಆರೋಪಿಗಳ ಬಿಡುಗಡೆಯನ್ನು ಸಂಭ್ರಮಿಸಿದ್ದಾರೆ.