ಬೆಳ್ತಂಗಡಿ: ಬಿಜೆಪಿ ಸರಕಾರ ದೇಶವನ್ನು ಪ್ರಗತಿಪಥದತ್ತ ಕೊಂಡೊಯ್ದಿದೆ. ದೇಶದ ಇನ್ನಷ್ಟು ಅಭಿವೃದ್ಧಿಗೆ ಈ ಬಾರಿಯ ಚುನಾವಣೆ ನಿರ್ಣಾಯಕವಾಗಿದೆ. ದೇಶದ ಸುಸ್ಥಿರತೆಗೆ ಮೋದಿಯವರ ನಾಯಕತ್ವ ಅಗತ್ಯವಾಗಿದ್ದು ಈ ಬಾರಿ 400ಕ್ಕೂ ಹೆಚ್ಚು ಸ್ಥಾನಗಳೊಂದಿಗೆ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಹೇಳಿದರು.
ಅವರು ಏ.23ರಂದು ಬೆಳ್ತಂಗಡಿಯ ಬಿಜೆಪಿ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಜಾಗತಿಕ ಮಟ್ಟದಲ್ಲಿ ಶೇ.7ರ ಬೆಳವಣಿಗೆಯೊಂದಿಗೆ ಭಾರತ ಪ್ರಮುಖ ಚಾಲಕ ಶಕ್ತಿಯಾಗಿ ಮುಂದುವರೆದಿದೆ. ಕೇಂದ್ರ ಸರಕಾರದ ಗಟ್ಟಿ ನಿರ್ಧಾರಗಳಿಂದ ಮೂಲಭೂತ ಸೌಕರ್ಯಗಳಿಗೆ ಸಾಕಷ್ಟು ಒತ್ತು ನೀಡಲಾಗಿದೆ. ಅಭಿವೃದ್ಧಿ ನಿರಂತರವಾಗಿ ಮುಂದುವರಿಯಲು ಮತ್ತೊಂದು ಬಾರಿ ಎನ್‌ಡಿಎ ನೇತೃತ್ವದ ಸರಕಾರ ಅಧಿಕಾರಕ್ಕೆ ಬರಬೇಕಾದ ಅಗತ್ಯವಿದೆ. ಈ ಬಾರಿ 400 ಸ್ಥಾನಗಳನ್ನು ಗೆಲ್ಲಲೇ ಬೇಕಾಗಿದೆ ಎಂದರು.
ರಾಜ್ಯ ಸರಕಾರದ 11 ತಿಂಗಳ ಆಡಳಿತ ಅವಧಿಯಲ್ಲಿ ಕಾನೂನು ವ್ಯವಸ್ಥೆ ಸಂಪೂರ್ಣ ವಿಫಲವಾಗಿದ್ದು, ತುಷ್ಟಿಕರಣವು ಪರಾಕಾಷ್ಠೆಯನ್ನು ತಲುಪಿದೆ. ಆಡಳಿತ ವೈಖರಿ ಭಯೋತ್ಪಾದನಾ ಕೃತ್ಯಗಳಿಗೆ ವಿಶ್ವಾಸ ತುಂಬುವಂತಿದೆ ಎಂದು ಕಾಂಗ್ರೆಸ್ ಸರಕಾರವನ್ನು ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಯಂತ ಕೋಟ್ಯಾನ್, ಮಂಡಲ ಅಧ್ಯಕ್ಷ ಶ್ರೀನಿವಾಸರಾವ್, ರಾಜೇಶ್ ಪೆಂರ್ಬುಡ ಉಪಸ್ಥಿತರಿದ್ದರು.