ಬೆಳ್ತಂಗಡಿ: ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಮತದಾರರು ಅಭ್ಯರ್ಥಿಗಳಿಗೆ ಚುನಾವಣಾ ಬಹಿಷ್ಕಾರದ ಬಿಸಿ ಮುಟ್ಟಿಸಲು ಆರಂಭಿಸಿದ್ದಾರೆ. ಇಂತಹ ಒಂದು ಘಟನೆ ನಾವೂರು ಗ್ರಾಮದಲ್ಲಿ ನಡೆದಿದೆ.
ಕೈಕಂಬದಿಂದ ಹತ್ಯಡ್ಕ , ಬಳ್ಳಿತೋಟ , ಬೋಜಾರ ಸೇರಿದಂತೆ ನಡ ಗ್ರಾಮದ ಮೂಡಾಯಿಬೆಟ್ಟು ಸಂಪರ್ಕಿಸುವ ರಸ್ತೆಯು ಸಂಪೂರ್ಣ ಅವ್ಯವಸ್ಥಿತವಾಗಿದ್ದು ಜನ ಮತ್ತು ವಾಹನ ಸಂಚಾರಕ್ಕೆ ತೊಡಕುಂಟಾಗಿದೆ. ತಾಲೂಕಿನಲ್ಲಿ 2019 ರಲ್ಲಿ ಸಂಭವಿಸಿದ ಭೀಕರ ಪ್ರವಾಹದಿಂದಾಗಿ ಕೈಕಂಬದಲ್ಲಿ ಸೇತುವೆಯು ಬಿರುಕು ಬಿಟ್ಟಿದ್ದು, ಈವರೆಗೂ ಯಾವುದೇ ಜನಪ್ರತಿನಿಧಿಗಳು ಈ ಸಮಸ್ಯೆಗೆ ಸ್ಪಂದಿಸಿಲ್ಲ. ಹೀಗಾಗಿ ಲೋಕಸಭಾ ಚುನಾವಣೆಯನ್ನು ಬಹಿಷ್ಕಾರಿಸುವುದಾಗಿ ಸಾರ್ವಜನಿಕರು ಬ್ಯಾನರ್ ಅಳವಡಿಸಿದ್ದರು. ಈ ಹಿನ್ನಲೆ ಏ.17ರಂದು ಸ್ಥಳಕ್ಕೆ ಬೆಳ್ತಂಗಡಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ವೈಜನ್ನ ನೇತೃತ್ವದಲ್ಲಿ ಅಧಿಕಾರಿಗಳು ಭೇಟಿ ನೀಡಿ ಸಾರ್ವಜನಿಕರೊಂದಿಗೆ ಮಾತುಕತೆ ನಡೆಸಿ ಮತದಾನದಲ್ಲಿ ಭಾಗವಹಿಸಲು ಮನವೊಲಿಸಿದ್ದಾರೆ.
ಸಾರ್ವಜನಿಕರ ಸಮಸ್ಯೆ ಬಗ್ಗೆ ಮಾತನಾಡಿದ ಅಧಿಕಾರಿಗಳು, ಈ ರಸ್ತೆ ಹಾಗೂ ಸೇತುವೆಯನ್ನು ಮುಖ್ಯ ಆದ್ಯತೆಯ ಮೇರೆಗೆ ಪುನರ್ ನಿರ್ಮಾಣ ಕಾರ್ಯ ಕೈಗೊಳ್ಳಲಾಗುವುದು, ಮೇಲಾಧಿಕಾರಿಗಳು ಸೇರಿದಂತೆ ಸರ್ಕಾರಕ್ಕೆ ಪೋಟೋ ಸಮೇತ ವರದಿ ಮಾಡಲಾಗುವುದು, ಚುನಾವಣೆ ಮುಗಿದ ಬಳಿಕ ರಸ್ತೆಯ ಅಭಿವೃದ್ಧಿ ಮಾಡಲಾಗುವುದು ಎಂದು ಅವರು ಸಾರ್ವಜನಿಕರಿಗೆ ಭರವಸೆ ನೀಡಿದರು.
ಅಧಿಕಾರಿಗಳ ಮಾತಿಗೆ ಬೆಲೆ ನೀಡಿದ ಸಾರ್ವಜನಿಕರು ಚುನಾವಣಾ ಬಹಿಷ್ಕಾರದ ಬ್ಯಾನರ್ ಅನ್ನು ತೆರವುಗೊಳಿಸಿ, ಚುನಾವಣೆ ಬಳಿಕ ಕಾಮಗಾರಿ ಕೈಗೊಳ್ಳದಿದ್ದರೆ ಮುಂದಿನ ಎಲ್ಲಾ ಚುನಾವಣೆಗಳನ್ನು ಬಹಿಷ್ಕಾರಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಬೆಳ್ತಂಗಡಿ ತಾಲೂಕು ಪಂಚಾಯತು ಕಛೇರಿ ಅಧಿಕ್ಷಕ ಪ್ರಶಾಂತ್ ಬಳೆಂಜ , ನಾವೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಸಂತ ಪೂಜಾರಿ , ಸಾರ್ವಜನಿಕರಾದ ಬಂಗಾಡಿ ಸಿಎ ಬ್ಯಾಂಕ್ ನಿವೃತ್ತ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಉಮೇಶ್ ಹತ್ಯಡ್ಕ , ಸುರೇಂದ್ರ ಪೂಜಾರಿ , ಜನಾರ್ದನ ನೈಕ ಸೇರಿದಂತೆ ಹಲವರು ಜೊತೆಗಿದ್ದರು.