ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ: ಸಿ.ಟಿ.ರವಿ ವಿರುದ್ಧ ಎಫ್ ಐ ಆರ್: ಧರ್ಮದ ಆಧಾರದ ಮೇಲೆ ದ್ವೇಷವನ್ನು ಹುಟ್ಟುಹಾಕಿದ ಆರೋಪ

ಬೆಂಗಳೂರು: ಎಕ್ಸ್ ಖಾತೆಯಲ್ಲಿ ರಾಹುಲ್ ಗಾಂಧಿ ಹೇಳಿಕೆ ಉಲ್ಲೇಖಿಸಿ ದ್ವೇಷ ಹುಟ್ಟುಹಾಕುವ ಪೋಸ್ಟ್ ಹಾಕಿದ ಹಿನ್ನಲೆ ಬಿಜೆಪಿ ರಾಷ್ಟ್ರೀಯ ಮಾಜಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವಿರುದ್ಧ ಚುನಾವಣಾ ಆಯೋಗ ಎಫ್‌ಐಆರ್ ದಾಖಲಿಸಿದೆ.

ಸಿಟಿ ರವಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ “ಸಾಗರದ ಆಳವನ್ನಾದರೂ ಅಳೆಯಬಹುದು, ಆದರೆ ರಾಹುಲ್ ಗಾಂಧಿ ಮನಸಿನಲ್ಲಿ ಹಿಂದೂಗಳು ಮತ್ತು ಹಿಂಧೂ ಧರ್ಮದ ಬಗ್ಗೆ ಇರುವ ದ್ವೇಷವನ್ನು ಅಳೆಯಲಾಗದು. ರಾಹುಲ್ ಗಾಂಧಿ ಅವರು, ಶಕ್ತಿ ವಿರುದ್ಧ ನಮ್ಮ ಹೋರಾಟ ಎಂದಿದ್ದಾರೆ. ಹಿಂದೂ ಧರ್ಮದಲ್ಲಿ ಶಕ್ತಿ ಎಂಬುದಕ್ಕೆ ವಿಶೇಷ ಅರ್ಥ, ಗೌರವ ಇದೆ, ಇದರ ವಿರುದ್ಧ ಹೋರಾಟ ಮಾಡುವವರು, ಹಿಂದೂ ಧರ್ಮದ ವಿರೋಧಿಗಳು” “ಕಾಂಗ್ರೆಸ್ ಸಹ-ಮಾಲೀಕ ರಾಹುಲ್ ಗಾಂಧಿ ಅವರು ಹಿಂದೂಗಳಾದ ನಮ್ಮ ವಿರುದ್ಧ ಸಮರ ಸಾರಿದ್ದಾರೆ. ಸನಾತನ ಧರ್ಮವನ್ನು ನಾಶಮಾಡಲು ಹೊರಟಿರುವವರಿಂದ ಪ್ರತಿಭಟಿಸಲು ಮತ್ತು ರಕ್ಷಿಸಲು ನಾವು ಒಗ್ಗೂಡುವ ಸಮಯ ಬಂದಿದೆ” ಎಂದು ಬರೆದುಕೊಂಡಿದ್ದರು. ಈ ಪೋಸ್ಟ್ ಚುನಾವಣಾ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ಚುನಾವಣಾ ಆಯೋಗದ ಸಾಮಾಜಿಕ ಜಾಲತಾಣಗಳ ಮೇಲ್ವಿಚಾರಣಾ ಸಮಿತಿಯ ಸಹಾಯಕ ಚುನಾವಣಾಧಿಕಾರಿಯೊಬ್ಬರು ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಎಫ್ ಐ ಆರ್ ದಾಖಲಾಗಿದೆ.

error: Content is protected !!