ಬೆಳ್ತಂಗಡಿ : ಅಕ್ರಮ ಮದ್ಯ ದಾಸ್ತಾನು ಘಟಕಕ್ಕೆ ಅಬಕಾರಿ ದಾಳಿ: 45 ಸಾವಿರ ರೂ ಮೌಲ್ಯದ ಮದ್ಯ ವಶಕ್ಕೆ: ಆರೋಪಿ ದಯಾನಂದ ಗೌಡ ಬಂಧನ

ಬೆಳ್ತಂಗಡಿ : ಅಕ್ರಮವಾಗಿ ಗೋಡೌನ್ ನಲ್ಲಿ ಮದ್ಯವನ್ನು ದಾಸ್ತಾನು ಮಾಡಿದ್ದ ಕುರಿತು ಖಚಿತ ಮಾಹಿತಿ ಪಡೆದ ಮಂಗಳೂರು ಅಬಕಾರಿ ಡಿಸಿ ವಿಶೇಷ ಪತ್ತೆ ದಳ ಸಿಬ್ಬಂದಿಗಳು ದಾಳಿ ಮಾಡಿ ಮದ್ಯ ಹಾಗೂ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಬೆಳ್ತಂಗಡಿ ತಾಲೂಕು ಬೆಳಾಲು ಗ್ರಾಮದ ಮಿನಂದೆಲ್ ನಿವಾಸಿ ಶೀನಾ ಗೌಡರ ಮಗ ದಯಾನಂದ ಗೌಡ (47) ಎಂಬವರು ಮಿನಂದೆಲ್ ಬಾನಿ ಮೆನ್ಸ್ ಪಾರ್ಲರ್ ನ ಹಿಂಭಾಗದ ಗೋಡೌನ್ ನಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ ಬಾರ್ ಅಥವಾ ವೈನ್ ಶಾಪ್ ನಿಂದ ಖರೀದಿಸಿ ಅಕ್ರಮವಾಗಿ ಮದ್ಯ ಶೇಖರಿಟ್ಟಿದ್ದರು. ಈ ಬಗ್ಗೆ ಮಂಗಳೂರು ಅಬಕಾರಿ ಡಿಸಿ ವಿಶೇಷ ಪತ್ತೆ ದಳಕ್ಕೆ ಮಾಹಿತಿ ಲಭ್ಯವಾಗಿದ್ದು ತಕ್ಷಣ ಕಾರ್ಯಪ್ರವೃತರಾದ ಅಧಿಕಾರಿಗಳು ಮಾ. 21 ರಂದು ಸಂಜೆ 6 ಗಂಟೆಗೆ ಸ್ಥಳಕ್ಕೆ ದಾಳಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಸುಮಾರು 45,000 ರೂಪಾಯಿ ಮೌಲ್ಯದ 67.950 ಲೀಟರ್ ಅಕ್ರಮ ಮದ್ಯ, ಹಾಗೂ 68.680 ಲೀಟರ್ ಬಿಯರ್ ವಶಕ್ಕೆ ಪಡೆದುಕೊಂಡಿದ್ದಾರೆ.

ಬೆಳ್ತಂಗಡಿ ಅಬಕಾರಿ ದಳ ಇಲಾಖೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿ ದಯಾನಂದ ಗೌಡ ಅವರನ್ನು ಬಂಧಿಸಲಾಗಿದೆ.

ಕಾರ್ಯಾಚರಣೆಯಲ್ಲಿ ಮಂಗಳೂರು ಅಬಕಾರಿ ಡಿಸಿ ವಿಶೇಷ ಪತ್ತೆ ದಳದ ಇನ್ಸ್ ಪೆಕ್ಟರ್ ಮತ್ತು ಸಿಬ್ಬಂದಿಗಳು ಭಾಗವಹಿಸಿದರು.

error: Content is protected !!