ಮಂಡ್ಯದಲ್ಲಿ ಬರ್ಬರ ಹತ್ಯೆ: ಹಣ ಕೇಳಲು ಬಂದವರು ಹೆಣವಾಗಿ ಪತ್ತೆ: ಮಹಿಳೆ ಮತ್ತು ಮಗುವನ್ನು ತುಂಡರಿಸಿ ಚೀಲದಲ್ಲಿ ತುಂಬಿ ಕೆರೆಗೆ ಎಸೆದ ದುಷ್ಕರ್ಮಿಗಳು!

ಮಂಡ್ಯ: ತನಗೆ ನೀಡಬೇಕಾಗಿದ್ದ ಹಣವನ್ನು ಕೇಳಲು ಹೋದ ಮಹಿಳೆ ಬರ್ಬರ ಹತ್ಯೆಯಾಗಿ, ಹೆಣವಾಗಿ ಪತ್ತೆಯಾದ ಘಟನೆ ನಾಗಮಂಗಲ ತಾಲೂಕಿನ ಆದಿಚುಂಚನಗಿರಿಯಲ್ಲಿ ಸಂಭವಿಸಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಕಲ್ಕೆರೆ ಗ್ರಾಮದ ಜಯಮ್ಮ (46), ಅವರು ಮಾ 12 ರಂದು ತನ್ನ ಎರಡೂವರೆ ವರ್ಷದ ಮೊಮ್ಮಗಳ ಜೊತೆ ಆದಿಚುಂಚನಗಿರಿಯ ವ್ಯಕ್ತಿಯೊಬ್ಬರ ಬಳಿಯಿಂದ ತನಗೆ ಹಣ ನೀಡಬೇಕಾಗಿದ್ದ ಹಣವನ್ನು ಕೇಳಲು ಬಂದಿದ್ದರು. ಅವರು ಮನೆಯಿಂದ ಹೊರಟ ಬಳಿಕ ಮಾ.18ರ ವರೆಗೂ ಮನೆಗೆ ಹಿಂದಿರುಗಿರಲಿಲ್ಲ. ಅಲ್ಲದೆ ಅವರ ಮೊಬೈಲ್ ಫೋನ್ ಸ್ವೀಚ್ ಆಫ್ ಆಗಿತ್ತು. ಹೀಗಾಗಿ, ಜಯಮ್ಮ ಅವರ ಪುತ್ರ ಪ್ರವೀಣ್ ಅವರು ತಾಯಿ ಮತ್ತು ತನ್ನ ಪುತ್ರಿ ಕಾಣೆಯಾಗಿರುವುದಾಗಿ ಅಜ್ಜಂಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಮಾ.18ರಂದು ಮಧ್ಯಾಹ್ನ ಪ್ರವೀಣ್ ಮೊಬೈಲ್‌ಗೆ ಕರೆ ಮಾಡಿದ ವ್ಯಕ್ತಿಯೊಬ್ಬ ಜಯಮ್ಮ ಮತ್ತು ರಿಷಿಕಾಳನ್ನು ಕೊಲೆ ಮಾಡಿ ಚೀಲದಲ್ಲಿ ಕಟ್ಟಿ ಆದಿಚುಂಚನಗಿರಿ ಕಲ್ಯಾಣಿ ಬಳಿ ಇರುವ ಕೆರೆಗೆ ಬಿಸಾಕಿರುವುದಾಗಿ ತಿಳಿಸಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದ. ಬಳಿಕ ಪ್ರವೀಣ್ ಪೊಲೀಸರ ನೆರವಿನೊಂದಿಗೆ ಕೆರೆಗೆ ಬಂದು ಹುಡುಕಿದಾಗ ಚೀಲದಲ್ಲಿ ತುಂಡರಿಸಿದ ಸ್ಥಿತಿಯಲ್ಲಿ ಇಬ್ಬರ ಮೃತದೇಹಗಳು ಪತ್ತೆಯಾಗಿದ್ದವು. ಮುಖದ ಗುರುತು ಸಿಗದಂತೆ ಜಯಮ್ಮ ಮತ್ತು ರಿಷಿಕಾಳನ್ನು ಕೊಲೆ ಮಾಡಲಾಗಿತ್ತು.

ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಯತೀಶ್, ಎಎಸ್ಪಿ ತಿಮ್ಮಯ್ಯ, ಸಿಪಿಐ ಬಿ.ಆರ್. ಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.

error: Content is protected !!