ಬೆಳ್ತಂಗಡಿ: ಶ್ರೀ ಕ್ಷೇತ್ರ ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಹಾಗೂ ಜಾತ್ರೋತ್ಸವ ಕಾರ್ಯಕ್ರಮಗಳು ಏ.08 ರಿಂದ 17ರವರೆಗೆ ಅಧ್ಯಕ್ಷರಾದ ಶಶಿಧರ್ ಶೆಟ್ಟಿ ನವಶಕ್ತಿ ಗುರುವಾಯನಕೆರೆ ಇವರ ನೇತೃತ್ವದಲ್ಲಿ ವಿಜೃಂಭಣೆಯಿಂದ ಜರುಗಲಿದೆ.
ಈಗಾಗಲೇ ದೇವಸ್ಥಾನದಲ್ಲಿ ವಿವಿಧ ಕಾಮಗಾರಿಗಳು ಭರದಿಂದ ಸಾಗುತ್ತಿದೆ. ದೇವಸ್ಥಾನದ ಒಳ ಭಾಗದ ಕಾಮಗಾರಿಗಳು ಬಹುತೇಕ ಪೂರ್ಣಗೊಂಡಿದೆ. ಅದಲ್ಲದೆ ನೂತನ ಆಕರ್ಷಣೀಯ ಮಹಾದ್ವಾರ, ಪುಷ್ಕರಿಣಿ, ಚಿತ್ರಕೂಟ ಮಾದರಿಯ ನಾಗ ಸನ್ನಿಧಿ, ದೈವಗಳ ಗುಡಿ ಸೇರಿದಂತೆ ಅಂಗಣಕ್ಕೆ ಗ್ರಾನೈಟ್ ಅಳವಡಿಕೆ, ಸುಣ್ಣ-ಬಣ್ಣಗಳ ಕಾಮಗಾರಿಗಳು ಅಂತಿಮ ಹಂತದಲ್ಲಿದೆ.
ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಮಾ 22 ರಂದು ಬೆಳಿಗ್ಗೆ ವಿವಿಧ ಗಣ್ಯರ ಉಪಸ್ಥಿತಿಯಲ್ಲಿ ಚಪ್ಪರ ಮಹೂರ್ತ,ಹಾಗೂ ಕಾರ್ಯಾಲಯ ಉದ್ಘಾಟನೆ ನಡೆಯಲಿದೆ. ಬ್ರಹ್ಮಕಲಶೋತ್ಸವಕ್ಕೆ ವಿವಿಧ ಸಮಿತಿಗಳನ್ನು ರಚಿಸಲಾಗಿದ್ದು ಆಮಂತ್ರಣ ಪತ್ರಿಕೆ ಹಂಚಿಕೆ ಮಾಡಲಾಗುತ್ತಿದೆ.
ಇನ್ನು ಕೆಲವೇ ದಿನಗಳಲ್ಲಿ ಊರ ದೇವರ ಬ್ರಹ್ಮಕಲಶೋತ್ಸವ ವಿಜೃಂಭಣೆಯಿಂದ ನಡೆಯಲಿದ್ದು ಗ್ರಾಮಸ್ಥರೆಲ್ಲರೂ ಉತ್ಸಾಹದಿಂದ ಶ್ರಮದಾನ ಸೇರಿದಂತೆ ವಿವಿಧ ಸೇವಾ ಕಾರ್ಯದಲ್ಲಿ ಕೈ ಜೋಡಿಸುತ್ತಿದ್ದಾರೆ.