ಮಂಗಳೂರು: ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಮಂಗಳೂರು ಲೋಕಸಭಾ ಕ್ಷೇತ್ರದ ಕಮಲ ಪಕ್ಷದಲ್ಲಿನ 5 ಟಿಕೆಟ್ ಆಕಾಂಕ್ಷಿಗಳ ಪೈಪೋಟಿ ಜೋರಾಗುತ್ತಿದೆ. ಅಭ್ಯರ್ಥಿ ಯಾರು? ಯಾರಿಗೆ ಟಿಕೆಟ್ ಸಿಗಲಿದೆ ಎಂಬ ಕುತೂಹಲವೂ ಹೆಚ್ಚಾಗಿದೆ.
ಬಿಜೆಪಿ ಪಕ್ಷದ ಅಭ್ಯರ್ಥಿಗಳೇ ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ ಕಳೆದ 3 ದಶಕಗಳಿಂದ ವಿಜಯ ಸಾಧಿಸುತ್ತಿದ್ದಾರೆ. 1991 ರಿಂದ 1999ರ ವರೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ವಿ ಧನಂಜಯ ಕುಮಾರ್ 2004ಕ್ಕೆ ಡಿ ವಿ ಸದಾನಂದ ಗೌಡ, 2009 ರಿಂದ 2019ರ ವರೆಗೆ ನಳಿನ್ ಕುಮಾರ್ ಕಟೀಲ್ ಅಭ್ಯರ್ಥಿಯಾಗಿ ಸಂಸದರಾಗಿದ್ದಾರೆ.
ಸಧ್ಯ 2024ರ ಲೋಕಸಭಾ ಚುನಾವಣೆಗೆ ಸಾಕಷ್ಟು ಸಿದ್ಧತೆಗಳು ನಡೆಯುತ್ತಿದೆ. ಈ ಹಿನ್ನಲೆ ಈಗಾಗಲೇ ಬಿಜೆಪಿಯಿಂದ 3 ಬಾರಿ ಗೆದ್ದಿರುವ ನಳಿನ್ ಕುಮಾರ್ ಕಟೀಲ್ 4ನೇ ಬಾರಿಗೆ ಸ್ಪರ್ಧಿಸಲು ಸಜ್ಜಾಗಿದ್ದಾರೆ. ಆದರೆ ಇವರ ಜೊತೆಗೆ ಕ್ಯಾಪ್ಟನ್ ಬ್ರಿಜೇಶ್ ಚೌಟ, ಸತ್ಯಜಿತ್ ಸುರತ್ಕಲ್, ಅರುಣ್ ಕುಮಾರ್ ಪುತ್ತಿಲ, ನಾಗರಾಜ್ ಶೆಟ್ಟಿ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.
ಅಪ್ಪಟ ಹಿಂದುತ್ವವಾದಿ, ಕಳೆದ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರನಾಗಿ ಸ್ಪರ್ಧಿಸಿ ಬಿಜೆಪಿಯನ್ನೇ ಮೂರನೇ ಸ್ಥಾನಕ್ಕೆ ನೂಕಿದ ಅರುಣ್ ಕುಮಾರ್ ಪುತ್ತಿಲ ಕೂಡ ಲೋಕಸಭಾ ಚುನಾವಣೆಯ ಟಿಕೆಟ್ ನಿರೀಕ್ಷೆಯಲ್ಲಿರುವವರು. ಅನೇಕ ಹಿಂದುತ್ವವಾದಿಗಳು ಕೂಡ ಅರುಣ್ ಕುಮಾರ್ ಪುತ್ತಿಲ ಅವರಿಗೆ ಟಿಕೇಟ್ ಸಿಗಬೇಕು ಎಂದು ಬಯಸಿದ್ದಾರೆ.
ನಳಿನ್ ಕುಮಾರ್ ಕಟೀಲ್ ಅವರಿಗೆ ಟಿಕೆಟ್ ಸಿಗದಿದ್ದರೆ ತನ್ನನ್ನು ಪರಿಗಣಿಸಬೇಕು ಎಂದು ಮಾಜಿ ಸಚಿವ ಬಿ.ನಾಗರಾಜ್ ಶೆಟ್ಟಿ ಹೇಳಿದ್ದಾರೆ. ಹೀಗಾಗಿ ಟಿಕೆಟ್ ಆಕಾಂಕ್ಷಿಯಾಗಿರುವ ಸಾಲಿನಲ್ಲಿ ಇವರೂ ಒಬ್ಬರು.
ಹಿಂದೂ ಸಂಘಟನೆಯಲ್ಲಿ ಗುರುತಿಸಿಕೊಂಡು 2019ರಲ್ಲಿಯೂ ಟಿಕೆಟ್ ಆಕಾಂಕ್ಷಿಯಾಗಿದ್ದ ಸತ್ಯಜಿತ್ ಸುರತ್ಕಲ್ 2024ರ ಲೋಕಸಭಾ ಚುನಾವಣೆಯಲ್ಲೂ ಟಿಕೆಟ್ ನಿರೀಕ್ಷೆಯಲ್ಲಿದ್ದಾರೆ. ಬಿಲ್ಲವ ಸಮುದಾಯದವರಾಗಿರುವ ಸತ್ಯಜಿತ್ ಸುರತ್ಕಲ್ ಒಂದೊಮ್ಮೆ ಹಿಂದುತ್ವದ ಹೆಸರಿನಲ್ಲಿ ಪ್ರಬಲ ಹೋರಾಟ ಮಾಡಿದ್ದರು.
ಈ ಎಲ್ಲಾ ಹೆಸರುಗಳ ಮಧ್ಯೆ ಕರಾವಳಿಯಲ್ಲಿ ಹೆಚ್ಚಾಗಿ ಕೇಳಿ ಬರುತ್ತಿರುವ ಹೆಸರು ಕ್ಯಾ.ಬ್ರಜೇಶ್ ಬ್ರಿಜೇಶ್ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿದ ಬಳಿಕ ರಾಜಕಾರಣದಲ್ಲಿ ಗುರುತಿಸಿಕೊಂಡಿರುವ ಕ್ಯಾ. ಬ್ರಜೇಶ್ ಚೌಟ ಸದ್ಯ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಲ್ಲೊಬ್ಬರು. ಮಂಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವ ಇವರು ಯಡಿಯೂರಪ್ಪ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದಾರೆ. ಈ ಬಾರಿ ನಳಿನ್ ಕುಮಾರ್ ಕಟೀಲ್‌ಗೆ ಬಿಜೆಪಿ ಟಿಕೆಟ್ ಕೈತಪ್ಪಿದರೆ ಬ್ರಜೇಶ್ ಚೌಟ ಅವರಿಗೆ ಸಿಗುವ ಸಾಧ್ಯತೆ ಹೆಚ್ಚಾಗಿಯೇ ಇದೆ.