ಬೆಂಗಳೂರು: ಈ ವರ್ಷ ನಡೆಯುವ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಮೂರು ಬಾರಿ ನಡೆಸುವ ಸಂಬಂಧ ಪರೀಕ್ಷಾ ಮೇಲ್ವಿಚಾರಕಾಗಿ ಪ್ರೌಢಶಾಲಾ ಶಿಕ್ಷಕರನ್ನು ಹೊರಗಿಟ್ಟಿರುವ ಬಗ್ಗೆ ವಿಧಾನಪರಿಷತ್ ಶೂನ್ಯವೇಳೆಯಲ್ಲಿ ಶಿಕ್ಷಣ ಸಚಿವ ಮಧುಬಂಗಾರಪ್ಪ ನೀಡಿದ ಉತ್ತರ ಖಂಡಿಸಿ ವಿರೋಧ ಪಕ್ಷದ ಕೆಲ ಸದಸ್ಯರು ಸದನದ ಬಾವಿಗಿಳಿದು ಧರಣಿ ನಡೆಸಿದ್ದಾರೆ.
ವಿಪಕ್ಷ ಸದಸ್ಯ ಮರಿತಿಬ್ಬೇಗೌಡ, ನಾರಾಯಣಸ್ವಾಮಿ ಸಂಕನೂರು ಅವರು ಮಾತನಾಡಿ, ಸಾಮೂಹಿಕವಾಗಿ ಪ್ರೌಢಶಾಲಾ ಶಿಕ್ಷಕರನ್ನು ಪರೀಕ್ಷಾ ಕಾರ್ಯದಿಂದ ಇದೇ ಮೊದಲ ಬಾರಿಗೆ ಏಕಾಏಕಿ ತೆಗೆದುಹಾಕಿ ಅವರನ್ನು ಅವಮಾನ ಮಾಡಲಾಗಿದೆ. ಶಿಕ್ಷಕರನ್ನು ಸರ್ಕಾರವು ಸಂಶಯದಿಂದ ನೋಡುತ್ತಿದೆ. ಅಲ್ಲದೆ ಯಾರ ವರದಿ ಆಧಾರದ ಮೇರೆಗೆ ಎಸ್ಸೆಸ್ಸೆಲ್ಸಿಗೆ ಮೂರು ಬಾರಿ ಪರೀಕ್ಷೆ ನಡೆಸುತ್ತಿದ್ದೀರಾ ಎಂದು ಪ್ರಶ್ನಿಸಿದರು.
ಈ ಪ್ರಶ್ನೆಗೆ ಉತ್ತರಿಸಿದ ಸಚಿವರು ಒತ್ತಡ ರಹಿತ, ಫಲಿತಾಂಶದಲ್ಲಿ ಉನ್ನತೀಕರಿಸಲು ಇಲಾಖೆಯ ಎಲ್ಲ ಅಧಿಕಾರಿಗಳೊಂದಿಗೆ ಸಮಗ್ರವಾಗಿ ಚರ್ಚಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ, ಶಿಕ್ಷಕರನ್ನು ಅವಮಾನಿಸುವ ಉದ್ದೇಶ ನಮಗಿಲ್ಲ ಎಂದು ಹೇಳಿದ್ದಾರೆ.
ಸಚಿವರ ಉತ್ತರಕ್ಕೆ ಮತ್ತಷ್ಟು ಖಂಡನೆಗಳು ವ್ಯಕ್ತವಾಗಿದ್ದು ವಿಪಕ್ಷ ಸದಸ್ಯರು ಸದನದ ಬಾವಿಗಿಳಿದು ಕೆಲ ಕ್ಷಣಗಳ ಕಾಲ ಧರಣಿ ನಡೆಸಿದರು. ಶೂನ್ಯವೇಳೆಯಲ್ಲಿ ಚರ್ಚೆ ನಡೆಸುವುದು ನಿಯಮಬಾಹಿರ. ಅಲ್ಲದೇ ಬಾವಿಗಿಳಿದು ಮಾತನಾಡುವುದು ಸರಿಯಲ್ಲ ಎಂದು ಸಭಾಪತಿ ಪೀಠದಲ್ಲಿದ್ದ ಎಂ ಕೆ ಪ್ರಾಣೇಶ್ ಬೇಸರ ವ್ಯಕ್ತಪಡಿಸಿದರು.