ಮಂಗಳೂರು: ಶಾಲೆ ಮುಗಿಸಿ ಮನೆಗೆ ಬರುತ್ತಿದ್ದ ಬಾಲಕಿಗೆ ಬಸ್ಸಿನಲ್ಲಿ ಲೈಂಗಿಕ ಕಿರುಕುಳ ನೀಡಿದ ಕಾಮುಕ ನಿರ್ವಾಹಕನಿಗೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಎರಡು ವರ್ಷ ಕಠಿಣ ಸಜೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ.
2023ರ ಮಾರ್ಚ್ 23ರಂದು ಬಾಲಕಿಯು ಶಾಲೆಯಿಂದ ಬಿ.ಸಿ. ರೋಡ್‍ನಲ್ಲಿನ ತನ್ನ ಮನೆಗೆ ಬರಲು ಕೆಎಸ್‌ಆರ್‌ಟಿಸಿ ಬಸ್ ಹತ್ತಿದ್ದಳು. ಆಗ ಬಸ್‍ನಲ್ಲಿ ಕೆಲವಷ್ಟೇ ಪ್ರಯಾಣಿಕರಿದ್ದರು. ಮುಂದಿನ ನಿಲ್ದಾಣದಲ್ಲಿ ಅವರೆಲ್ಲ ಇಳಿದಿದ್ದು, ಆಗ ಬಸ್ಸಿನಲ್ಲಿ ಬಸ್ ಚಾಲಕ, ಆರೋಪಿ ನಿರ್ವಾಹಕ ಹಾಗೂ ಬಾಲಕಿ ಮಾತ್ರ ಇದ್ದರು. ಈ ವೇಳೆ, ಬಾಲಕಿಯ ಬಳಿ ಬಂದ ನಿರ್ವಾಹಕ ಆಕೆಗೆ ಕಿರುಕುಳ ನೀಡಿದ್ದಾನೆ. ತಾನು ಹೆತ್ತವರು, ಪೊಲೀಸರಿಗೆ ತಿಳಿಸುವುದಾಗಿ ಬಾಲಕಿ ಹೇಳಿದರೂ ಆರೋಪಿಯು ಕಿರುಕುಳ ಮುಂದುವರೆಸಿದ್ದು, ಅಸಭ್ಯವಾಗಿ ವರ್ತಿಸಿ, ಆಕೆಯ ಮಾನಕ್ಕೆ ಕುಂದುಂಟಾಗುವ ರೀತಿಯಲ್ಲಿ ವರ್ತಿಸಿದ್ದ. ಬಳಿಕ ಮುಂದಿನ ಬಸ್ ಸ್ಟಾಪ್‍ನಲ್ಲಿ ಕೆಲವು ಪ್ರಯಾಣಿಕರು ಹತ್ತಿದ್ದರು. ಆಗ ಆರೋಪಿ ವಿದ್ಯಾರ್ಥಿನಿ ಬಳಿಯಿಂದ ತೆರಳಿ ಪ್ರಯಾಣಿಕರಿಗೆ ಟಿಕೆಟ್ ನೀಡಿದ್ದ. ತೀವ್ರ ನೊಂದಿದ್ದ ಬಾಲಕಿ ಮನೆಗೆ ಬಂದು ಬಸ್ ಸಂಖ್ಯೆ ಸಹಿತ ತಾಯಿಯ ಬಳಿ ಘಟನೆ ಬಗ್ಗೆ ವಿವರಿಸಿದ್ದಳು. ನಂತರ ತಾಯಿ ಮತ್ತು ಬಾಲಕಿ ಬಂಟ್ವಾಳ ನಗರ ಪೊಲೀಸರು ಠಾಣೆಗೆ ತೆರಳಿ ದೂರು ನೀಡಿದ್ದರು.
ಪ್ರಕರಣ ದಾಖಲಿಸಿದ ಪೊಲೀಸರು ನಿರ್ವಾಹಕನನ್ನು ಬಂಧಿಸಿದ್ದರು. ಈ ಬಗ್ಗೆ ಇನ್ಸ್‍ಪೆಕ್ಟರ್ ನಂದಿನಿ ಎಸ್.ಶೆಟ್ಟಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಈ ಪ್ರಕರಣದಲ್ಲಿ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಸಾಬೀತಾಗಿದ್ದು, ಅಪರಾಧಿ ಬಸ್ ನಿರ್ವಾಹಕನಿಗೆ ಐಪಿಸಿ ಕಲಂ 509ರಡಿ ಒಂದು ವರ್ಷ ಸಾದಾ ಸಜೆ ಮತ್ತು 5 ಸಾವಿರ ರೂ. ದಂಡ, ಒಂದು ವೇಳೆ, ದಂಡ ಪಾವತಿಸಲು ತಪ್ಪಿದರೆ ಹೆಚ್ಚುವರಿಯಾಗಿ ಒಂದು ತಿಂಗಳು ಸಾದಾ ಸಜೆ, ಪೋಕ್ಸೊ ಕಾಯ್ದೆಯ ಕಲಂ 12ರಡಿ 2 ವರ್ಷ ಕಠಿಣ ಸಜೆ ಮತ್ತು 10 ಸಾವಿರ ರೂ. ದಂಡ, ಒಂದು ವೇಳೆ ದಂಡ ಪಾವತಿಸದಿದ್ದರೆ ಮತ್ತೆ 2 ತಿಂಗಳು ಸಾದಾ ಸಜೆ ವಿಧಿಸಲಾಗಿದೆ. ಅಲ್ಲದೇ, ಸಂತ್ರಸ್ತ ವಿದ್ಯಾರ್ಥಿನಿಗೆ 10 ಸಾವಿರ ರೂ. ಪರಿಹಾರ ನೀಡುವಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಆದೇಶಲಾಗಿದೆ.
ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಮಂಜುಳಾ ಇಟ್ಟಿ ಅವರು ಆರೋಪಿಗೆ ಶಿಕ್ಷೆ ವಿಧಿಸಿ, ತೀರ್ಪು ನೀಡಿದ್ದಾರೆ. ಪ್ರಾಸಿಕ್ಯೂಷನ್ ಪರವಾಗಿ ಪೋಕ್ಸೊವಿಶೇಷ ಸರ್ಕಾರಿ ಅಭಿಯೋಜಕಿ ಸಹನಾದೇವಿ ಬೋಳೂರು ಅವರು ವಾದಿಸಿದ್ದರು.