ಎಂಎಸ್‌ಪಿಗೆ ಕಾನೂನು ಮಾನ್ಯತೆ ನೀಡುವಂತೆ ಆಗ್ರಹ: ಸಂಘರ್ಷಕ್ಕೆ ತಿರುಗಿದ ದೆಹಲಿ ಚಲೋ ಹೋರಾಟ: ಓರ್ವ ರೈತ ಸಾವು: 12 ಪೊಲೀಸರಿಗೆ ಗಾಯ

ಚಂಡೀಗಢ: ಪಂಜಾಬ್ ಮತ್ತು ಹರಿಯಾಣ ರೈತರು ನಡೆಸುತ್ತಿರುವ ದೆಹಲಿ ಚಲೋ ಹೋರಾಟ ಸಂಘರ್ಷಕ್ಕೆ ತಿರುಗಿದ್ದು, ಓರ್ವ ರೈತ ಮೃತಪಟ್ಟಿದ್ದಾರೆ.

ಎಂಎಸ್‌ಪಿಗೆ ಕಾನೂನು ಮಾನ್ಯತೆ ನೀಡಬೇಕು ಎಂದು ಆಗ್ರಹಿಸಿ ಶಂಭು ಮತ್ತು ಖನೌರಿ ಗಡಿಯಲ್ಲಿ ಸಾವಿರಾರು ರೈತರು, ಭದ್ರತಾ ಸಿಬ್ಬಂದಿ ಜೊತೆಗೆ ಸಂಘರ್ಷಕ್ಕೆ ಮುಂದಾಗಿದ್ದಾರೆ. ಇದರಿಂದ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ.

ಕೇಂದ್ರ ಸರ್ಕಾರದೊಂದಿಗೆ ನಾಲ್ಕನೇ ಸುತ್ತಿನ ಸಭೆಯ ನಂತರ ಬೇಡಿಕೆಯಂತೆ ಎಂಎಸ್‌ಪಿಗೆ ಒಪ್ಪದ ಕಾರಣ ರೈತರು ದೆಹಲಿಗೆ ಮುತ್ತಿಗೆ ಹಾಕಲು ಶಂಭು ಗಡಿಯಲ್ಲಿ ಹಾಕಿರುವ ಬ್ಯಾರಿಕೇಡ್‌ಗಳನ್ನು ಮುರಿಯಲು ಯತ್ನಿಸಿದರು. ಇದನ್ನು ತಡೆಯಲು ಪೊಲೀಸರು ಅಶ್ರುವಾಯು ಸಿಡಿಸಿದರು. ಈ ವೇಳೆ ನಡೆದ ತಿಕ್ಕಾಟದಲ್ಲಿ ಪಂಜಾಬ್‌ನ ಬಟಿಂಡಾ ಜಿಲ್ಲೆಯ ಬಲೋಕೆ ಗ್ರಾಮದ ರೈತ ಸುಭಕರನ್ ಸಿಂಗ್ (21) ಎಂಬಾತ ಸಾವಿಗೀಡಾಗಿದ್ದಾನೆ. ಇನ್ನಿಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಭದ್ರತೆಗಿದ್ದ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ ಪ್ರತಿಭಟನಾನಿರತ ರೈತರು, ಅವರನ್ನು ಸುತ್ತುವರೆದು ಮೆಣಸಿನಕಾಯಿ ಪುಡಿಯನ್ನು ಸುರಿದು ಅದಕ್ಕೆ ಬೆಂಕಿ ಹಚ್ಚಿದ್ದರು. ಇದರಿಂದ ಹಲವಾರು ಪೊಲೀಸರು, ಉಸಿರಾಟ ತೊಂದರೆ, ಕಣ್ಣಿನ ಉರಿ, ನೋವು ಅನುಭವಿಸಿದರು. ಪ್ರತಿಭಟನಾ ಸ್ಥಳದಲ್ಲಿ ದೊಡ್ಡ ಬೆಂಕಿಯ ಜ್ವಾಲೆಗಳು ಎದ್ದವು. ಸಂಘರ್ಷದಲ್ಲಿ 12 ಪೊಲೀಸರು ಗಾಯಗೊಂಡಿದ್ದಾರೆ.
ಸಂಘರ್ಷ ತೀವ್ರಗೊಳ್ಳುತ್ತಿದ್ದಂತೆ ಎರಡು ದಿನ ತಾತ್ಕಾಲಿಕವಾಗಿ ಹೋರಾಟಕ್ಕೆ ವಿರಾಮ ನೀಡುವುದಾಗಿ ರೈತ ಮುಖಂಡರು ಘೋಷಿಸಿದ್ದಾರೆ.

error: Content is protected !!