ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣ: ಮರು ತನಿಖೆಗಾಗಿ ವಿಶೇಷ ತನಿಖಾ ತಂಡ ನೇಮಕಕ್ಕೆ ಹೈಕೋರ್ಟ್ ನೋಟಿಸ್

 

ಬೆಳ್ತಂಗಡಿ: ವಿದ್ಯಾರ್ಥಿನಿ ಸೌಜನ್ಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ನಿಜವಾದ ಆರೋಪಿಗಳನ್ನು ಪತ್ತೆ ಹಚ್ಚಲು ವಿಶೇಷ ತನಿಖಾ ತಂಡ ರಚಿಸಬೇಕೆಂದು ಸೌಜನ್ಯಾ ತಂದೆ ಚಂದಪ್ಪ ಗೌಡ ಅವರು ಸಲ್ಲಿಸಿರುವ ಅರ್ಜಿಯನ್ನು ಆಲಿಸಿದ ಹೈಕೋರ್ಟ್ ನ್ಯಾಯಪೀಠ ರಾಜ್ಯ ಸರಕಾರ ಹಾಗೂ ಸಿಬಿಐ ತನಿಖಾ ತಂಡಕ್ಕೆ ಮರು ತನಿಖೆಗೆ ನೋಟೀಸ್ ಜಾರಿಗೊಳಿಸಿದೆ.

ಸೌಜನ್ಯಾ ತಂದೆ ಚಂದಪ್ಪ ಗೌಡ ಅವರು ಸಲ್ಲಿಸಿರುವ ಅರ್ಜಿಯಲ್ಲಿ ಪ್ರಕರಣದ ನೈಜ ಆರೋಪಿಗಳ ಪತ್ತೆಗಾಗಿ ವಿಶೇಷ ತನಿಖಾ ತಂಡ ನೇಮಕ ಮಾಡಬೇಕು. ಅಲ್ಲದೆ, ನೈಜ ಆರೋಪಿಗಳ ಪತ್ತೆಯಾಗದಂತೆ ಸಾಕ್ಷö್ಯ ನಾಶ ಮಾಡಿರುವ ತನಿಖಾಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಕೇಳಿಕೊಂಡಿದ್ದರು. ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ನ್ಯಾ.ಕೆ.ನಟರಾಜನ್ ಅವರಿದ್ದ ಏಕಸದಸ್ಯ ಪೀಠ ರಾಜ್ಯ ಪೊಲೀಸ್ ಇಲಾಖೆಯ ಮುಖ್ಯಸ್ಥ ಡಿಜಿಪಿ, ಅಪರಾಧ ವಿಭಾಗದ ಎಡಿಜಿಪಿ ಮತ್ತು ಐಜಿಪಿ, ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ, ಬೆಳ್ತಂಗಡಿ ಠಾಣೆ ಇನ್ ಸ್ಪೆಕ್ಟರ್ ಗೂ ನೋಟೀಸ್ ಜಾರಿಗೊಳಿಸಿದೆ.

ಪ್ರಕರಣದ ಆರೋಪಿಯೆಂದು ಗುರುತಿಸಿರುವ ಸಂತೋಷ್ ರಾವ್ ನನ್ನು ಖುಲಾಸೆಗೊಳಿಸಿದ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಸಿಬಿಐ ಸಲ್ಲಿಸಿರುವ ಕ್ರಿಮಿನಲ್ ಮೇಲ್ಮನವಿ ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ವಿಚಾರಣೆಗೆ ಬಾಕಿಯಿದೆ. ಇದೇ ವೇಳೆ, ಮರು ತನಿಖೆಯ ಅರ್ಜಿಯನ್ನೂ ವಿಭಾಗೀಯ ಪೀಠದ ಮುಂದೆ ಇರಿಸಬೇಕೆಂದು ವಕೀಲರು ಮನವಿ ಮಾಡಿದ್ದು, ಅದನ್ನು ಪರಿಗಣಿಸಿದ ನ್ಯಾಯಪೀಠವು, ಸೂಕ್ತ ವಿಭಾಗೀಯ ಪೀಠದ ಮುಂದೆ ಈ ಅರ್ಜಿಯನ್ನು ವಿಚಾರಣೆಗೆ ನಿಗದಿಪಡಿಸಲು ಮುಖ್ಯ ನ್ಯಾಯಮೂರ್ತಿ ಅವರಿಂದ ಪಡೆಯುವಂತೆ ಕೋರ್ಟ್ ರಿಜಿಸ್ಟಾçರ್ ಗೆ ಸೂಚಿಸಿದೆ.

error: Content is protected !!