ವೇಣೂರು ಬಾಹುಬಲಿ ಮಹಾಮಸ್ತಕಾಭಿಷೇಕ ಆರಂಭ: ಇಂದಿನಿಂದ ಶತಮಾನದ ಮೂರನೇ ಮಹಾಮಜ್ಜನ: 9ನೇ ದಿನ 1008 ಕಲಶಗಳೊಂದಿಗೆ ಮಹಾಮಸ್ತಕಾಭಿಷೇಕ

ಬೆಳ್ತಂಗಡಿ: ವೇಣೂರು ಬಾಹುಬಲಿಯ ಶತಮಾನದ ಮೂರನೇ ಮಹಾಮಜ್ಜನ ಇಂದಿನಿಂದ (ಫೆ.22) ಆರಂಭವಾಗಲಿದೆ. ಯುಗಳಮುನಿಗಳಾದ 108 ಅಮೋಘ ಕೀರ್ತಿ ಮಹಾರಾಜರು ಹಾಗೂ 108 ಅಮರ ಕೀರ್ತಿ ಮಹಾರಾಜ ಅವರ ಸಾನ್ನಿಧ್ಯದಲ್ಲಿ, ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ಪ್ರತಿದಿನ ಸಂಜೆ ಗಂಟೆ 6:45 ರಿಂದ ಬಾಹುಬಲಿ ಸ್ವಾಮಿಗೆ ಮಹಾಮಸ್ತಕಾಭಿಷೇಕ ನೆರವೇರಲಿದೆ.

ಫೆ.22ರಿಂದ ಮಾ.1ರ ತನಕ ಮಹಾಮಜ್ಜನ ನಡೆಯಲಿದ್ದು, ಜಲ, ಸೀಯಾಳ, ಹಾಲು, ಇಕ್ಷುರಸ, ಕಲ್ಕರಸ, ಅರಿಶಿಣ ಹುಡಿ, ಕಷಾಯ, ಗಂಧ, ಕೇಸರಿ, ಚಂದನ, ಅಷ್ಟಗಂಧ ಮೊದಲಾದ ದ್ರವ್ಯಗಳ ಅಭಿಷೇಕವಾಗಿ ಬಳಿಕ ಪುಷ್ಪವೃಷ್ಠಿ ನಡೆಯಲಿದೆ. ಮೊದಲ 4 ದಿನ 108 ಕಲಶ, ಬಳಿಕ 3 ದಿನ 216 ಕಲಶ, 8ನೇ ದಿನ 504 ಕಲಶಗಳಿಂದ ಮಹಾಮಸ್ತಕಾಭಿಷೇಕ ಸೇವಾ ಕರ್ತೃಗಳಿಂದ ನಡೆಯಲಿದ್ದು, 9ನೇ ದಿನ 1008 ಕಲಶಗಳೊಂದಿಗೆ ಸಮಿತಿ ವತಿಯಿಂದ ಮಹಾಮಸ್ತಕಾಭಿಷೇಕ ನೆರವೇರಲಿದೆ.

ಮಧ್ಯಾಹ್ನ 3 ಗಂಟೆಗೆ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದ್ದು, ಸಚಿವ ದಿನೇಶ್ ಗುಂಡೂರಾವ್ ಸ್ಮರಣ ಸಂಚಿಕೆ ಬಿಡುಗಡೆ, ಸಂಸದ ನಳಿನ್ ಕುಮಾರ್ ಕಟೀಲ್ ವಸ್ತು ಪ್ರದರ್ಶನ ಉದ್ಘಾಟನೆ ನೆರವೇರಿಸಲಿದ್ದಾರೆ.
ಮಾಜಿ ಸಚಿವ ಅಭಯ ಚಂದ್ರ ಜೈನ್, ಧರ್ಮಸ್ಥಳದ ಡಿ.ಸುರೇಂದ್ರ ಕುಮಾರ್, ಶಾಸಕ ಹರೀಶ್ ಪೂಂಜ, ಎಂಎಲ್‌ಸಿ ಹರೀಶ್ ಕುಮಾರ್, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ವೇಣೂರು ಗ್ರಾಪಂ ಅಧ್ಯಕ್ಷ ನೇಮಯ್ಯ ಕುಲಾಲ್ ಮತ್ತಿತರರು ಭಾಗವಹಿಸಲಿದ್ದಾರೆ.

ಸಂಜೆ 7:30 ರಿಂದ ಸಾಂಸ್ಕೃತಿಕ ಕಾರ್ಯಕ್ರಮ, ಭರತನಾಟ್ಯ, ಯಕ್ಷಗಾನ ಜರಗಲಿದೆ.

ಈ ಸಂಭ್ರಮದ ಕಾರ್ಯಕ್ರಮಕ್ಕೆ ಭರ್ಜರಿ ಸಿದ್ಧತೆಗಳು ನಡೆದಿದ್ದು ದೀಪಾಲಂಕಾರ, ರಸ್ತೆ ದುರಸ್ತಿಗಳು ನಡೆದಿದೆ. ನಿತ್ಯ ಸುಮಾರು 20 ಸಾವಿರ ಭಕ್ತರ ಊಟೋಪಚಾರಕ್ಕೆ ವ್ಯವಸ್ಥೆ, ದೂರದ ಊರುಗಳಿಂದ ಆಗಮಿಸುವ ಜನರಿಗೆ ವಸತಿ ವ್ಯವಸ್ಥೆ ಮಾಡಲಾಗಿದೆ.

ಕಾರ್ಯಕ್ರಮದಲ್ಲಿ ಮೂಡಬಿದಿರೆ, ಶ್ರವಣಬೆಳಗೊಳ, ನರಸಿಂಹರಾಜಪುರ, ಲಕ್ಕವಳ್ಳಿ, ಹೊಂಬುಜ ಆರತೀಪುರ, ಸೋಂದ, ಅರಹಂತಗಿರಿ, ಕನಕಗಿರಿ ಕಂಬದಹಳ್ಳಿ, ಕಾರ್ಕಳ, ಕ್ಷೇತ್ರ ಗಾಂದಣಿ, ವರೂರು, ಕೊಲ್ಲಾಪುರ, ಜಿನಕಂಚಿ ಮೊದಲಾದ ಜೈನ ಮಠಗಳ ಮಹಾಸ್ವಾಮಿಗಳು ಭಾಗವಹಿಸಲಿದ್ದಾರೆ.

error: Content is protected !!