ಕೇರಳ : ಬಿಜೆಪಿ ಒಬಿಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ರಂಜಿತ್ ಶ್ರೀನಿವಾಸನ್ ಅವರ ಹತ್ಯೆ ಪ್ರಕರಣದ 15 ಅಪರಾಧಿಗಳಿಗೆ ಅಲಪ್ಪುಳ ನ್ಯಾಯಾಲಯ ಇಂದು ಮರಣದಂಡನೆ ಶಿಕ್ಷೆ ವಿಧಿಸಿದೆ.
8 ಜನ ಆರೋಪಿಗಳ ವಿರುದ್ಧ ಕೊಲೆ ಆರೋಪ ಹಾಗೂ ಉಳಿದವರ ವಿರುದ್ಧ ಸಂಚು ರೂಪಿಸಿದ ಆರೋಪ ಸಾಭೀತಾಗಿದೆ ಎಂದು ನ್ಯಾಯಾಲಯ ಹೇಳಿದೆ. ಡಿಸೆಂಬರ್ 19, 2021 ರಂದು, ಪಿ ಎಫ್ ಐ ಮತ್ತು ಎಸ್ ಡಿ ಪಿ ಐ ಕಾರ್ಯಕರ್ತರು ಬಿಜೆಪಿ ಒಬಿಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ರಂಜಿತ್ ಶ್ರೀನಿವಾಸನ್ ಅವರನ್ನು ಅಲಪ್ಪುಳಾದಲ್ಲಿ ಅವರ ಮನೆಗೆ ನುಗ್ಗಿ ತಾಯಿ, ಪತ್ನಿ ಹಾಗೂ ಮಗಳ ಎದುರೇ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ್ದರು. ರಂಜಿತ್ ಅವರನ್ನು ಆ ಕ್ಷಣವೇ ಅಲಪ್ಪುಳ ಸರ್ಕಾರಿ ಆಸ್ಪತ್ರೆಗೆ ಕರೆತರಲಾಗಿತ್ತಾದರೂ ಅಷ್ಟರಲ್ಲಿ ಅವರು ಮೃತಪಟ್ಟಿದ್ದರು.
ಘಟನೆ ಕುರಿತು ಪೊಲೀಸರು ತನಿಖೆ ನಡೆಸಿ ಕೆಲವರನ್ನು ಬಂಧಿಸಿದ್ದರು. ಈ ಬಗ್ಗೆ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಈ ಪ್ರಕರಣದಲ್ಲಿ 15 ಮಂದಿ ತಪ್ಪಿತಸ್ಥರೆಂದು ತೀರ್ಪು ನೀಡಿದೆ. ಮೃತ ರಂಜಿತ್ ಶ್ರೀನಿವಾಸನ್ ಅವರ ಕುಟುಂಬದ ಪರ ವಾದಿಸಿದ ಸರ್ಕಾರಿ ವಕೀಲರು ಬಿಜೆಪಿ ನಾಯಕನನ್ನು ಅವರ ಕುಟುಂಬದ ಮುಂದೆ ಬರ್ಬರವಾಗಿ ಕೊಲೆ ಮಾಡಿದ್ದಾರೆ ಇದನ್ನು ಅತ್ಯಂತ ಘೋರ ಅಪರಾಧ ಎಂದು ಪರಿಗಣಿಸಿ, ತಪ್ಪಿತಸ್ಥರಿಗೆ ಗರಿಷ್ಠ ಶಿಕ್ಷೆ ನೀಡುವಂತೆ ನ್ಯಾಯಾಲಯವನ್ನು ಕೋರಿದರು. ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯ ಅಪರಾಧಿಗಳಿಗೆ ಮರಣದಂಡನೆ ವಿಧಿಸಿ ತೀರ್ಪು ನೀಡಿತು. ಕೇರಳದ ಇತಿಹಾಸದಲ್ಲಿ ಒಂದೇ ಪ್ರಕರಣದಲ್ಲಿ ಇಷ್ಟೊಂದು ಮಂದಿಗೆ ಮರಣದಂಡನೆ ವಿಧಿಸಿರುವುದು ಇದೇ ಮೊದಲು.
ಶಿಕ್ಷೆಯ ಹಿನ್ನೆಲೆಯಲ್ಲಿ ನ್ಯಾಯಾಲಯದ ಆವರಣದಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ಚೆಂಗನ್ನೂರು ಮತ್ತು ಕಾಯಂಕುಲA ಡಿವೈಎಸ್ಪಿಗಳ ನೇತೃತ್ವದಲ್ಲಿ ಪೊಲೀಸರು ನ್ಯಾಯಾಲಯಕ್ಕೆ ಭದ್ರತೆ ಒದಗಿಸಿದರು. ಆಲಪ್ಪುಳ ಡಿವೈಎಸ್ಪಿ ಎನ್.ಆರ್.ಜಯರಾಜ್ ಪ್ರಕರಣದ ತನಿಖೆ ಪೂರ್ಣಗೊಳಿಸಿ ಚಾರ್ಜ್ ಶೀಟ್ ಸಲ್ಲಿಸಿದ್ದರು. ಪ್ರಾಸಿಕ್ಯೂಷನ್ 156 ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಿತು. ಸುಮಾರು ಒಂದು ಸಾವಿರ ದಾಖಲೆಗಳು ಮತ್ತು ಸುಮಾರು ನೂರು ಸಾಕ್ಷö್ಯಗಳನ್ನು ಹಾಜರುಪಡಿಸಲಾಯಿತು. ಇದರೊಂದಿಗೆ ಬೆರಳಚ್ಚುಗಳು, ಸಿಸಿಟಿವಿ ದೃಶ್ಯಾವಳಿಗಳು ಮತ್ತು ಗೂಗಲ್ ಮ್ಯಾಪ್‌ನ ಸಹಾಯದಿಂದ ಸಿದ್ಧಪಡಿಸಿದ ಮಾರ್ಗ ನಕ್ಷೆಗಳು ಸೇರಿದಂತೆ ವೈಜ್ಞಾನಿಕ ಪುರಾವೆಗಳು ಆರೋಪಿಗಳ ವಿರುದ್ಧ ನಿರ್ಣಾಯಕವಾಗಿವೆ.