ಅನಧಿಕೃತ ಪಟಾಕಿ ವ್ಯವಹಾರ ನಿಯಂತ್ರಿಸಲು ಸಮಿತಿ ರಚನೆ: ಎಲ್ಲಾ ಸುಡುಮದ್ದು ತಯಾರಿಕಾ ಘಟಕಗಳಿಗೆ ‘ಸೀಲ್ ಡೌನ್’ ಆದೇಶ: ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಿಂದ ಜಿಲ್ಲಾ ಮಟ್ಟದ ತನಿಖಾ ಸಮಿತಿಗೆ ಖಡಕ್ ಸೂಚನೆ

ವೇಣೂರು: ಕುಕ್ಕೇಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಡ್ತ್ಯಾರು ಎಂಬಲ್ಲಿ ಜ.28 ರಂದು ಸಂಜೆ ಪಟಾಕಿ ಗೋಡೌನ್ ನಲ್ಲಿ ಸಂಭವಿಸಿದ ಭೀಕರ ಸ್ಪೋಟದಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಆದರೆ ಮುಂದೆ ಇಂತಹ ಘಟನೆಗಳು ನಡೆಯದಂತೆ ಎಚ್ಚರಗೊಂಡ ಜಿಲ್ಲಾಧಿಕಾರಿ 6 ಸದಸ್ಯರನ್ನೊಳಗೊಂಡ ಜಿಲ್ಲಾ ಮಟ್ಟದ ತನಿಖಾ ಸಮಿತಿಯನ್ನು ರಚಿಸಿ, ತನಿಖೆಗೆ ಸೂಚಿಸಿ ಎಲ್ಲಾ ಸುಡುಮದ್ದು ತಯಾರಿಕಾ ಘಟಕಗಳಿಗೆ ‘ಸೀಲ್ ಡೌನ್’ ಆದೇಶ ಹೊರಡಿಸಿದೆ.

ಸುಡುಮದ್ದು ತಯಾರಿಕಾ ಘಟಕಗಳು, ದಾಸ್ತಾನು ಮತ್ತು ಮಾರಾಟ ಮಳಿಗೆಗಳ ಅಗ್ನಿಅನಾಹುತಗಳನ್ನು ತಪ್ಪಿಸಲು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವ ಉದ್ದೇಶದಿಂದ ಮಾನ್ಯ ಸರ್ವೋಚ್ಛ ನ್ಯಾಯಾಲಯದ ಆದೇಶ ಹಾಗೂ ಸರಕಾರದ ನಿರ್ದೇಶನ ಮತ್ತು ಮಾರ್ಗಸೂಚಿಗಳಂತೆ ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡುತ್ತಿರುವುದನ್ನು ಮೇಲ್ವಿಚಾರಣೆ ಮಾಡಲು ಹಾಗೂ ಅನಧಿಕೃತವಾಗಿ ಪಟಾಕಿ ವ್ಯವಹಾರ ಮಾಡುತ್ತಿರುವುದನ್ನು ನಿಯಂತ್ರಿಸಲು ಮತ್ತು ಪಟಾಕಿಗಳನ್ನು ತಯಾರಿಕೆ, ದಾಸ್ತಾನು ಮತ್ತು ಮಾರಾಟ ಮಾಡುವ ಸಂದರ್ಭದಲ್ಲಿ ಅಗ್ನಿ ಅನಾಹುತಗಳನ್ನು ಸಂಭವಿಸುವುದನ್ನು ತಡೆಗಟ್ಟಲು ಈ ಸಮಿತಿಯನ್ನು ರಚಿಸಲಾಗಿದೆ.

ಉಪವಿಭಾಗಾಧಿಕಾರಿ, ಮಂಗಳೂರು ಹಾಗೂ ಪುತ್ತೂರು ಉಪವಿಭಾಗ, ಉಪ ಪೊಲೀಸ್ ಅಧೀಕ್ಷಕರು, ಬಂಟ್ವಾಳ ಮತ್ತು ಪುತ್ತೂರು, ವಲಯ ಅಗ್ನಿಶಾಮಕಾಧಿಕಾರಿ, ಪಾಂಡೇಶ್ವರ, ಮಂಗಳೂರು, ಕಾರ್ಯನಿರ್ವಾಹಕ ಅಭಿಯಂತರರು, ಮೆಸ್ಕಾಂ, ಮಂಗಳೂರು, ಜಿಲ್ಲೆಯ ಎಲ್ಲಾ ಕಾರ್ಯನಿರ್ವಹಣಾಧಿಕಾರಿಯವರು ತಾಲೂಕು ಪಂಚಾಯತ್, ಪರಿಸರ ಅಧಿಕಾರಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಮಂಗಳೂರು ಸಮಿತಿಯಲ್ಲಿದ್ದು ಆದೇಶದಂತೆ ಅನಧಿಕೃತ ಪಟಾಕಿ ವ್ಯವಹಾರದ ಬಗ್ಗೆ ತನಿಖೆ ನಡೆಸಲಿದ್ದಾರೆ.

ತನಿಖೆಯ  ಪ್ರಮುಖ ಅಂಶಗಳು

ತಮ್ಮ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸುಡುಮದ್ದು ತಯಾರಿಕಾ ಘಟಕಗಳನ್ನು ಈ ತಕ್ಷಣದಿಂದ ಜಾರಿಗೆ ಬರುವಂತ ಸೀಲ್ ಡೌನ್ ಮಾಡತಕ್ಕದ್ದು.

ತಮ್ಮ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸುಡುಮದ್ದು ತಯಾರಿಕಾ ಘಟಕಗಳು ಹಾಗೂ ದಾಸ್ತಾನು ಮತ್ತು ಮಾರಾಟ ಮಳಿಗೆಗಳು Explosive Act 1884 ರ ಅಧಿನಿಯಮ 40 ರಂತ ಮತ್ತು Explosive Rules  2008ರ Rule-128 128 ರಂತೆ ಜಂಟಿಯಾಗಿ ಸಮನ್ವಯ ಸಾಧಿಸಿಕೊಂಡು ಪರಿಶೀಲಿಸತಕ್ಕದ್ದು.

ಸ್ಥಳ ಪರಿಶೀಲನೆ ಮಾಡುವ ಸಂದರ್ಭದಲ್ಲಿ ಜಮೀನಿನ ಜಿಪಿಎಸ್ ಫೋಟೋವನ್ನು ಕ್ಲಿಕ್ಕಿಸಿಕೊಂಡು ವರದಿಯನ್ನು ನೀಡಲು ಸೂಚನೆ

ಈ ಕಛೇರಿಯಿಂದ ಅಧಿಕೃತವಾಗಿ ನಮೂನೆ ಐಇ-1 ರಲ್ಲಿ ಸುಡುಮದ್ದು ತಯಾರಿಕಾ ಘಟಕಗಳಲ್ಲಿ ಮಾಡಲು ಪರವಾನಿಗೆ ಪಡೆದುಕೊಂಡಿರುವ ಬಗ್ಗೆ ಪರಿಶೀಲಿಸತಕ್ಕದ್ದು ಹಾಗೆಯೇ ದಾಸ್ತಾನು ಮತ್ತು ಮಾರಾಟ ಮಳಿಗೆಗಳ ಅಧಿಕೃತವಾಗಿ ನಮೂನ ಐಇ-5 ರಲ್ಲಿ ಪಡೆದುಕೊಂಡಿರುವ ಬಗ್ಗೆ ಪರಿಶೀಲಿಸತಕ್ಕದ್ದು.

ಸುಡುಮದ್ದು ತಯಾರಿಕಾ ಘಟಕಗಳು ಹಾಗೂ ದಾಸ್ತಾನು ಮತ್ತು ಮಾರಾಟ ಮಳಿಗಳು ಅಗ್ನಿಶಾಮಕ ಇಲಾಖೆಯಿಂದ ನಿರಾಕ್ಷೇಪಣಾ ಪತ್ರಗಳನ್ನು ಪಡೆದುಕೊಂಡಿರುವ ಬಗ್ಗೆ ಪರಿಶೀಲಿಸತಕ್ಕದ್ದು ಹಾಗೂ ಸದ್ರಿ ನಿರಾಕ್ಷೇಪಣಾ ಪತ್ರಗಳು ವಾಯಿದೆ ಇರುವ ಬಗ್ಗೆ ಪರಿಶೀಲಿಸುವುದು.

ಹಸಿರು ಪಟಾಕಿಗಳನ್ನು ಅಧಿಕೃತ ಉತ್ಪಾದಕರಿಂದ ಹಾಗೂ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆಗೊಂಡು ಉತ್ಪಾದಿಸಲಾಗಿದೆಯೇ ಎಂಬುವುದರ ಬಗ್ಗೆ ಪರಿಶೀಲಿಸತಕ್ಕದ್ದು.
ಸುಡುಮದ್ದು ತಯಾರಿಕಾ ಘಟಕಗಳಲ್ಲಿ ಅಗ್ನಿ ನಿವಾರಣಾ ಹಾಗೂ ಅಗ್ನಿಶಮನ ವ್ಯವಸ್ಥೆ ಇರವ ಬಗ್ಗೆ ಪರಿಶೀಲಿಸುವುದು.

ತಮ್ಮ ವ್ಯಾಪ್ತಿಯಲ್ಲಿ ಬರುವ ಸುಡುಮದ್ದು ತಯಾರಿಕಾ ಘಟಕಗಳು ಹಾಗೂ ದಾಸ್ತಾನು ಮತ್ತು ಮಾರಾಟ ಮಳಿಗೆಗಳು ಸಂಬಂಧಪಟ್ಟ ಇಲಾಖೆಗಳಿಂದ ನಿರಕ್ಷೇಪಣಾ ಪತ್ರ ಹಾಜರುಪಡಿಸಿದ ನಂತರ ಕಾರ್ಯಾರಂಭಕ್ಕೆ ಅಗತ್ಯ ಪೂರಕ ದಾಖಲೆಗಳ ಸಹಿತ ಸ್ಪಷ್ಟ ಅಭಿಪ್ರಾಯದೊಂದಿಗೆ ಶಿಫಾರಸ್ಸನ್ನು ಈ ಕಛೇರಿಗೆ ಸಲ್ಲಿಸಲು ಕ್ರಮವಹಿಸುವುದು.

ಈ ಎಲ್ಲಾವುಗಳನ್ನು ಅಧಿಕಾರಿಗಳು ಖುದ್ದು ಸ್ಥಳಗಳಿಗೆ ಭೇಟಿ ನೀಡಿ ದಾಖಲೆಗಳನ್ನು ಮತ್ತು ತಯಾರಿಕಾ ಘಟಕಗಳು ಹಾಗೂ ದಾಸ್ತಾನು ಮತ್ತು ಮಾರಾಟ ಮಳಿಗೆಗಳು ಸ್ಫೋಟಕಗಳ ನಿಯಮಗಳು 2008 ರಂತೆ ನಿಯಮಾನುಸಾರ ಕೂಲಂಕುಷವಾಗಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಂಡು ಫೆ.05ರ ಒಳಗಾಗಿ ಸ್ಪಷ್ಟ ಅಭಿಪ್ರಾಯವನ್ನು ಕಛೇರಿಗೆ ಸಲ್ಲಿಸುವಂತೆ ಆದೇಶ ನೀಡಿದೆ.

error: Content is protected !!