ಬೆಂಗಳೂರು: ಬೆಳಗಾವಿ ತಾಲೂಕಿನಲ್ಲಿ ನಡೆದಿದ್ದ ಅಮಾನವೀಯ ಘಟನೆಗೆ ಸಂಬಂಧಿಸಿದಂತೆ ಮಾಧ್ಯಮಗಳ ವರದಿಯನ್ನು ಗಮನಿಸಿದ ಹೈಕೋರ್ಟ್ ಖಡಕ್ ಎಚ್ಚರಿಕೆ ನೀಡಿದೆ.
ಪುತ್ರ, ಯುವತಿಯೊಂದಿಗೆ ಓಡಿ ಹೋದ ಕಾರಣಕ್ಕೆ ಮಹಿಳೆಯೊಬ್ಬರನ್ನು ವಿವಸ್ತ್ರಗೊಳಿಸಿದ ಪ್ರಕರಣದಲ್ಲಿ ಸಂತ್ರಸ್ತೆಯ ಗುರುತು ಪತ್ತೆಯಾಗುವಂತೆ ವರದಿ ಮಾಡಿದ ಮಾಧ್ಯಮಗಳ ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ಇಡೀ ಪ್ರಕರಣವನ್ನು ಸ್ವಯಂಪ್ರೇರಿತ ಅರ್ಜಿಯನ್ನಾಗಿ ದಾಖಲಿಸಿಕೊಂಡಿದೆ. ಅಲ್ಲದೆ ಘಟನೆಯ ವರದಿ ಮಾಡುವಾಗ ಕನಿಷ್ಠ ತಾಳ್ಮೆ, ಸಂವೇದನೆಯನ್ನು ಮಾಧ್ಯಮಗಳು ಪ್ರದರ್ಶಿಸಿಲ್ಲ ಎಂದಿದೆ.
ಮಾದ್ಯಮಗಳನ್ನು ತರಾಟೆಗೆ ತೆಗೆದುಕೊಂಡ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಎಂ.ಜೆ.ಎಸ್ ಕಮಲ್ ಅವರಿದ್ದ ವಿಭಾಗೀಯ ಪೀಠ, ಸಚಿವರೊಬ್ಬರು ಸಂತ್ರಸ್ತೆಯನ್ನು ಭೇಟಿಯಾದ ಸಂದರ್ಭದಲ್ಲಿ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಛಾಯಾಚಿತ್ರದಲ್ಲಿ ಸಂತ್ರಸ್ತೆಯ ಮುಖವನ್ನು ಗುರುತು ಸಿಗುವಂತೆ ವಿಡಿಯೋ ಮಾಡಿರುವುದು ಗೊತ್ತಾಗಿದೆ. ಈ ವರದಿಯ ಶೀರ್ಷಿಕೆಗಳು ನಮ್ಮ ಆತ್ಮಸಾಕ್ಷಿಯನ್ನು ಆಘಾತಗೊಳಿಸಿದೆ. ಅಷ್ಟೇ ಅಲ್ಲದೆ, ಮನಸ್ಸಿಗೆ ದುಃಖ ಹಾಗೂ ನಮ್ಮನ್ನು ತಲೆ ತಗ್ಗಿಸುವಂತೆ ಮಾಡಿದೆ. ಸಂತ್ರಸ್ತೆಯ ಗುರುತು ಸಿಗುವಂತೆ ಯಾವುದೇ ಮಾಧ್ಯಮ ಸಂಸ್ಥೆ ಚಿತ್ರಿಸಿರುವ ಯಾವುದೇ ಛಾಯಾಚಿತ್ರಗಳು ಮತ್ತು ವಿಡಿಯೋಗಳನ್ನು ಪ್ರಸಾರ ಮಾಡಬಾರದು. ಜೊತೆಗೆ, ಈಗಾಗಲೇ ಪ್ರದರ್ಶನ ಮಾಡಿದ್ದರೆ ಅದನ್ನು ತಕ್ಷಣವೇ ಸ್ಥಗಿತಗೊಳಿಸಬೇಕು . ಈ ಮಧ್ಯಂತರ ನಿರ್ದೇಶನ ಸಂತ್ರಸ್ಥೆ ತನ್ನ ಘನತೆ ಕಾಪಾಡಿಕೊಳ್ಳಲು ಮತ್ತು ಆಕೆಯ ಗುರುತನ್ನು ಬಹಿರಂಗಪಡಿಸದಿರುವುದಕ್ಕೆ ಮಾತ್ರವೇ ವಿನಃ ಪತ್ರಿಕಾ ಸ್ವಾತಂತ್ರ‍್ಯದ ಪರಿಕಲ್ಪನೆಯ ನಿಯಂತ್ರಣ ಎಂದಾಗುವುದಿಲ್ಲ, ಯಾವುದೇ ಸುದ್ದಿ ಪ್ರಸಾರವನ್ನು ನಿಷೇಧಿಸಿಲ್ಲ ಎಂದು ಸ್ಪಷ್ಟಪಡಿಸಿದೆ.