ಬೆಳ್ತಂಗಡಿ: ಶಿವನಿಗೂ ಚಂದ್ರನಿಗೂ ಅವಿನಾಭಾವ ಸಂಬAಧವಿದ್ದು ಶಿವ ಶಿರದಲ್ಲಿ ಚಂದ್ರನಿಗೆ ಸ್ಥಾನವಿದೆ. ಚಂದ್ರಯಾನ–3 ರ ಯಶಸ್ಸಿನಿಂದ ಇನ್ನೂ ಹೆಚ್ಚಿನ ಸಾಧನೆ, ಸಂಶೋಧನೆ ನಡೆಯಲಿದೆ ಎಂದು ಖ್ಯಾತ ವಿಜ್ಞಾನಿ ಹಾಗೂ ಬೆಂಗಳೂರಿನ ಇಸ್ರೋ ನಿರ್ದೇಶಕ ರಾಮಕೃಷ್ಣ ಬಿ.ಎನ್. ಹೇಳಿದರು.
ಅವರು ಮಂಗಳವಾರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಸಂದರ್ಭ ಆಯೋಜಿಸಿದ ಸಾಹಿತ್ಯ ಸಮ್ಮೇಳನದ 91ನೆ ಅಧಿವೇಶನವನ್ನು ಉದ್ಘಾಟಿಸಿ ಮಾತನಾಡಿದರು.
ದೇವರು ಹಾಗೂ ದೇವರ ಸ್ವರೂಪಿಗಳಾದ ಮಾನವರ ಶುಭ ಹಾರೈಕೆಯಿಂದ ಚಂದ್ರನ ದಕ್ಷಿಣ ಭಾಗದಲ್ಲಿ ಯಾವುದೇ ಅಡಚಣೆ ಇಲ್ಲದೆ ಚಂದ್ರಯಾನ–3 ನೆಲೆಯೂರುವಂತಾಯಿತು. ಆ ಜಾಗವನ್ನು “ಶಿವಶಕ್ತಿ” ಎಂದು ಪ್ರಧಾನಿ ನರೇಂದ್ರ ಮೋದಿಯವರೇ ನಾಮಕರಣ ಮಾಡಿ ನಮ್ಮನ್ನೆಲ್ಲಾ ಅಭಿನಂದಿಸಿದ್ದಾರೆ ಎಂದು ಅವರು ಸಂತಸ ವ್ಯಕ್ತಪಡಿಸಿದರು. ಅಲ್ಲಿಂದ ಕಲ್ಲು ಮತ್ತು ಮಣ್ಣನ್ನು ತಂದು ಇನ್ನೂ ಹೆಚ್ಚಿನ ವಿಶ್ಲೇಷಣೆ ಹಾಗೂ ಸಂಶೋಧನೆ ನಡೆಸಬೇಕೆಂದು ಪ್ರಧಾನಿಯವರು ನಿರ್ದೇಶನ ನೀಡಿದ್ದಾರೆ. ಇದರಿಂದಾಗಿ ಇಸ್ರೋದ ನಾಲ್ಕು ವರ್ಷಗಳ ಭಗೀರಥ ಪ್ರಯತ್ನ ಯಶಸ್ವಿಯಾಗಿದೆ ಎಂದು ಅಭಿಮಾನದಿಂದ ಹೇಳಿದರು.
ಇಡೀ ವಿಶ್ವವೇ ಚಕಿತಗೊಂಡು ಭಾರತದ ಕಡೆಗೆ ಈಗ ನೋಡುತ್ತಿದೆ ಎಂದು ಅವರು ತಿಳಿಸಿದರು. ಪ್ರಸ್ತುತ ಚಂದ್ರಯಾನ – 4 ಕ್ಕೆ ಭರದಿಂದ ಸಿದ್ಧತೆಗಳು ನಡೆಯುತ್ತಿವೆ. ಯುವ ವಿಜ್ಞಾನಿಗಳು ಕೂಡಾ ಕುತೂಹಲ ಮತ್ತು ಆಸಕ್ತಿಯಿಂದ ಈ ಬಗ್ಗೆ ಪ್ರಯತ್ನಿಸಿ ಸಹಕರಿಸಬೇಕು ಎಂದು ಅವರು ಕೋರಿದರು. ಮುಂದೆ ಬಾಹ್ಯಾಕಾಶ ಯಾನದಲ್ಲಿ ನಮ್ಮ ನಿರೀಕ್ಷೆಗಿಂತಲೂ ಹೆಚ್ಚಿನ ಯಶಸ್ಸು ದೊರಕಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ ಕರ್ನಾಟಕ ಗಮಕ ಪರಿಷತ್ ಅಧ್ಯಕ್ಷರಾದ ಡಾ. ಎ.ವಿ. ಪ್ರಸನ್ನ ಮಾತನಾಡಿ, ಗಮಕ ಕಲೆ ಕರ್ನಾಟಕದ ವಿಶಿಷ್ಟವಾದ ಆಕರ್ಷಣೀಯವಾದ ಕಲೆಯಾಗಿದೆ. ಕವಿಗಳು ರಚಿಸಿದ ಸಾಹಿತ್ಯವನ್ನು ಜನಸಾಮಾನ್ಯರಿಗೆ ಅರ್ಥವಾಗುವಂತೆ ತಿಳಿಸುವ ಕಲೆಯೇ ಗಮಕಕಲೆಯಾಗಿದ್ದು ಕುಮಾರವ್ಯಾಸ ಗಮಕಿಗಳ ಕಾಮಧೇನು ಎಂದು ಬಣ್ಣಿಸಿದರು. ಇದೇ ರೀತಿ ಲಕ್ಷ್ಷ್ಮೀಶ, ರಾಘವಾಂಕ, ಹರಿಹರ, ಜೈನಕಾಶಿ ಮೂಡಬಿದ್ರೆಯ ಕವಿ ರತ್ನಾಕರವರ್ಣಿ ಪ್ರಸಿದ್ಧ ಗಮಕಿಗಳಾಗಿದ್ದಾರೆ. ಗಮಕಿಗಳು ರಾಗಬದ್ಧವಾಗಿ ಜನಸಾಮಾನ್ಯರಿಗೆ ಸುಲಭ ರೀತಿಯಲ್ಲಿ ತಿಳಿಯುವಂತೆ ವಾಚನ-ವ್ಯಾಖ್ಯಾನ ಮಾಡುತ್ತಾರೆ. 2000ನೇ ಇಸವಿಯಲ್ಲಿ ಪುತ್ತೂರು ತಾಲ್ಲೂಕಿನ ಶಾಂತಿಗೋಡು ಎಂಬಲ್ಲಿ ದೊರಕಿದ “ತುಳು ಮಹಾಭಾಬಾರತೊ” ಕೃತಿ ಕುಮಾರವ್ಯಾಸನ ಕಾಲನಿರ್ಣಯದ ಬಗ್ಗೆ ಅಧಿಕೃತ ಪುರಾವೆ ನೀಡಿದೆ ಎಂದು ಅವರು ತಿಳಿಸಿದರು. ಹಿಂದೆ ಗ್ರಾಮೀಣ ಪ್ರದೇಶದ ಮನೆಗಳಲ್ಲಿ ಮಾತ್ರ ಜನಪ್ರಿಯವಾಗಿದ್ದ ಗಮಕಕಲೆ ಈಗ ಹೆಚ್ಚು ಮಹತ್ವ ಪಡೆಯುತ್ತಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು. ಧರ್ಮಸ್ಥಳದಲ್ಲಿ ಪ್ರತಿವರ್ಷ ಮಳೆಗಾಲದಲ್ಲಿ ಎರಡು ತಿಂಗಳು ನಡೆಯುವ ಪುರಾಣ ವಾಚನ-ಪ್ರವಚನ ಕಾರ್ಯಕ್ರಮದ ಬಗ್ಗೆ ಅವರು ವಿಶೇಷ ಮೆಚ್ಚುಗೆ ವ್ಯಕ್ತಪಡಿಸಿ ಹೆಗ್ಗಡೆಯವರನ್ನು ಅಭಿನಂದಿಸಿದರು.
ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಸಾಹಿತ್ಯಗಳ ಪರಂಪರೆ ಮತ್ತು ಅವುಗಳಲ್ಲಿರುವ ಸತ್ವ, ಸಂದೇಶಗಳನ್ನು ತಿಳಿದುಕೊಂಡು ಧರ್ಮಮಾರ್ಗದಲ್ಲಿ ಸುಖ-ಶಾಂತಿ, ನೆಮ್ಮದಿಯಿಂದ ಜೀವನ ಮಾಡಬೇಕು ಎಂಬುದು ಜಗತ್ತಿನ ಎಲ್ಲಾ ಸಾಹಿತ್ಯಗಳ ಮತ್ತು ಸಾಹಿತ್ಯ ಪ್ರಕಾರಗಳ ಆಶಯವಾಗಿದೆ. ಧರ್ಮ ಮತ್ತು ಸಾಹಿತ್ಯ ಒಂದೇ ನಾಣ್ಯದ ಎರಡು ಮುಖಗಳು . ಸಮಾಜಕ್ಕೆ ಹಿತವನ್ನುಂಟುಮಾಡುವುದೇ ಸಾಹಿತ್ಯದ ಉದ್ದೇಶವಾಗಿದೆ. ಸಾಹಿತ್ಯ ಸೃಷ್ಠಿಗೆ ಓದು-ಬರಹ ಅಗತ್ಯವಿಲ್ಲ. ಅನುಭವ ಮತ್ತು ಭಾವನೆಗಳ ಅಭಿವ್ಯಕ್ತಿಯೇ ಸಾಹಿತ್ಯ. ಎಲ್ಲಾ ಭಾಷೆಗಳ ಸಾಹಿತ್ಯಕ್ಕೂ ಜನಪದ ಸಾಹಿತ್ಯವೇ ಮೂಲವಾಗಿದೆ. ಆರಂಭದಲ್ಲಿ ಭಾಷೆಯೇ ಸಾಹಿತ್ಯವಾಗಿತ್ತು.
ಕಳೆದ 90 ವರ್ಷಗಳಿಂದಲೂ ಪ್ರತಿವರ್ಷ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಸಂದರ್ಭದಲ್ಲಿ ಸರ್ವಧರ್ಮ ಸಮ್ಮೇಳನ ಮತ್ತು ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸಲಾಗುತ್ತದೆ.
ಆದಿಕವಿ ಪಂಪನಿಂದ ಹಿಡಿದು ಕುವೆಂಪು, ಬೇಂದ್ರೆ, ಹಂಪನಾ ಅವರ ಸಾಹಿತ್ಯ ಕೃತಿಗಳಲ್ಲಿರುವ ಮೌಲ್ಯಗಳನ್ನು, ಧಾರ್ಮಿಕ ಚಿಂತನೆಗಳನ್ನು ಜನಸಾಮಾನ್ಯರಿಗೆ ತಲುಪಿಸಲು ಧರ್ಮಸ್ಥಳ ಕ್ಷೇತ್ರದಿಂದ ನಿರಂತರ ಪ್ರಯತ್ನ ಮಾಡಲಾಗುತ್ತದೆ. ನಾವು ನಮ್ಮ ಮಕ್ಕಳಿಗೆ ಆಧ್ಯಾತ್ಮಿಕ ಶಿಕ್ಷಣ ಮತ್ತು ಸಾಹಿತ್ಯದ ಶಿಕ್ಷಣ ನೀಡಲು ಆದ್ಯತೆ ಮತ್ತು ಬದ್ಧತೆ ತೋರಬೇಕು ಎಂದು ಸಲಹೆ ನೀಡಿದರು. ಧರ್ಮ, ಸಾಹಿತ್ಯ ಮತ್ತು ಸಂಸ್ಕೃತಿ ಹಾಗೂ ಮಾನವೀಯ ಮೌಲ್ಯಗಳ ಶಿಕ್ಷಣದಿಂದ ವಂಚಿತರಾಗಬಾರದು. ಧರ್ಮ ಮತ್ತು ಸಾಹಿತ್ಯ ಕೇವಲ ನಂಬಿಕೆ ಮತ್ತು ಭಾವನೆಗಳ ವಿಚಾರವಲ್ಲ. ಆವು ವಿಶೇಷ ಜ್ಞಾನ ನೀಡುವ ವಿಜ್ಞಾನವೇ ಆಗಿದೆ. ಮುದ್ರಿತ ಗ್ರಂಥಗಳಲ್ಲದೆ ದಿನಪತ್ರಿಕೆ, ವಾರಪತ್ರಿಕೆ, ಪಾಕ್ಷಿಕ ಮತ್ತು ಮಾಸಪತ್ರಿಕೆಗಳಲ್ಲಿ ಇಂದು ಸಾಹಿತ್ಯಕ್ಕಾಗಿ ಕೆಲವು ಪುಟಗಳನ್ನು ಮೀಸಲಾಗಿಟ್ಟಿರುವುದು ಸ್ವಾಗತಾರ್ಹವಾಗಿದೆ. ಅಲ್ಲದೆ ರೇಡಿಯೊ, ಟಿ.ವಿ. ಯೂಟ್ಯೂಬ್ ಮೊದಲಾದ ಆಧುನಿಕ ಮಾಧ್ಯಮಗಳಿಂದ ಯಾರು, ಎಲ್ಲಿ ಬೇಕಾದರೂ ಓದಬಹುದು, ಚರ್ಚಿಸಬಹುದು, ಆನಂದಿಸಬಹುದು.
ಧರ್ಮಸ್ಥಳದ ವತಿಯಿಂದ ಮಹಿಳಾ ಸಬಲೀಕರಣಕ್ಕಾಗಿ 2121 ಗ್ರಾಮಗಳಲ್ಲಿ ಗ್ರಂಥಾಲಯಗಳನ್ನು ಆರಂಭಿಸಿ ಮಹಿಳೆಯರಲ್ಲಿ ಓದುವ, ಬರೆಯುವ ಬಗ್ಗೆ ಹಾಗೂ ಸಾಹಿತ್ಯಾಸಕ್ತಿ ಮೂಡಿಸಲಾಗಿದೆ. ಧರ್ಮಸ್ಥಳದ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ಕನ್ನಡ ಭಾಷೆ, ಸಾಹಿತ್ಯ ಸಂವರ್ಧನೆಗೆ ವಿಶೇಷ ಪ್ರೋತ್ಸಾಹ ನೀಡಲಾಗುತ್ತದೆ. ಧರ್ಮಸ್ಥಳದಲ್ಲಿರುವ ಗ್ರಂಥಾಲಯದಲ್ಲಿ 5 ಸಾವಿರಕ್ಕೂ ಮಿಕ್ಕಿ ಅಮೂಲ್ಯ ಹಸ್ತಪ್ರತಿಗಳ ಸಂರಕ್ಷಣೆ ಮಾಡಿ ಅವುಗಳ ಅಧ್ಯಯನ ಮತ್ತು ಸಂಶೋಧನೆಗೆ ಪ್ರೋತ್ಸಾಹ ನೀಡಲಾಗುತ್ತದೆ. ಯಕ್ಷಗಾನ ಮಂಡಳಿ ಮೂಲಕ ಕಲೆ, ಸಾಹಿತ್ಯದ ಮೂಲಕ ಧರ್ಮಪ್ರಭಾವನೆ ಮಾಡಲಾಗುತ್ತದೆ. ಮಂಜುವಾಣಿ ಮತ್ತು ನಿರಂತರ ಎಂಬ ಎರಡು ಮಾಸ ಪತ್ರಿಕೆಗಳನ್ನು ಪ್ರಕಾಶನ ಮಾಡಲಾಗುತ್ತದೆ. ಪ್ರತಿವರ್ಷ ಮಳೆಗಾಲದಲ್ಲಿ ನಿರಂತರ ಎರಡು ತಿಂಗಳು ಪುರಾಣ ವಾಚನ-ಪ್ರವಚನ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಧರ್ಮಸ್ಥಳದಿಂದ ನಿರಂತರ ಸಾಹಿತ್ಯ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಲಾಗುತ್ತದೆ ಎಂದರು.
ಹೊನ್ನಾವರದ ಡಾ. ಎ. ಶ್ರೀಪಾದ ಶೆಟ್ಟಿ “ಸಾಹಿತ್ಯ-ಸಂಸ್ಕೃತಿಯ ನೆಲೆ” ಬಗ್ಗೆ, ಬೆಂಗಳೂರಿನ ಪ್ರಕಾಶ್ ಬೆಳವಾಡಿ “ರಂಗಭೂಮಿ ಮತ್ತು ಸಾಹಿತ್ಯ ಸಿರಿ” ಬಗ್ಗೆ ಹಾಗೂ ಬಂಟ್ವಾಳದ ಡಾ. ಅಜಕ್ಕಳ ಗಿರೀಶ್ ಭಟ್ “ಭಾಷೆ ಮತ್ತು ಸಾಹಿತ್ಯ ಪರಸ್ಪರ ಅವಲಂಬನೆ” ಬಗ್ಗೆ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಡಿ. ಸುರೇಂದ್ರ ಕುಮಾರ್ ಮತ್ತು ಡಿ. ಹರ್ಷೇಂದ್ರ ಕುಮಾರ್ ಉಪಸ್ಥಿತರಿದ್ದರು.
ಬೆಳ್ತಂಗಡಿಯ ವಕೀಲ ಕೇಶವ ಗೌಡ ಧನ್ಯವಾದವಿತ್ತರು. ಎಸ್.ಡಿ.ಎಮ್. ಕಾಲೇಜಿನ ಕನ್ನಡ ಉಪನ್ಯಾಸಕರುಗಳಾದ ದಿವಾ ಕೊಕ್ಕಡ ಮತ್ತು ರಾಜಶೇಖರ ಹಳೇಮನೆ ಕಾರ್ಯಕ್ರಮ ನಿರ್ವಹಿಸಿದರು.