ಬೆಂಗಳೂರು: ಕಳೆದ ಕೆಲ ವರ್ಷಗಳಿಂದ ಮಂಡಿನೋವಿನಿಂದ ಬಳಲುತ್ತಿರುವ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಿ ಶಸ್ತ್ರಚಿಕಿತ್ಸೆಗೆ ಒಳಗಾಗಲು ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿನ ಫೋರ್ಟಿಸ್ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ವೈದ್ಯಕೀಯ ತಪಾಸಣೆ ಮಾಡುವಾಗ ಮಂಡಿ ಶಸ್ತ್ರಚಿಕಿತ್ಸೆಗೂ ಮುನ್ನ ಹೃದಯದ ಶಸ್ತ್ರಚಿಕಿತ್ಸೆ ಮಾಡಬೇಕು ಎಂದು ವೈದ್ಯರು ತಿಳಿಸಿದ್ದಾರೆ.
ಮೊಣಕಾಲು ನೋವು ತೀವ್ರಗೊಂಡ ಹಿನ್ನಲೆ ಅ.15ರಂದು ಫೋರ್ಟಿಸ್ ಆಸ್ಪತ್ರೆಗೆ ದಾಖಲಾಗಿ, ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಲು ಮುಂದಾಗಿದ್ದರು. ಮಂಡಿ ಶಸ್ತ್ರಚಿಕಿತ್ಸೆ ನಡೆಸುವ ಮೊದಲು ಹೃದಯ ಪರೀಕ್ಷೆ ನಡೆಸಿದಾಗ ಹೃದಯದಲ್ಲಿ ರಂಧ್ರವಿರುವುದು ಪತ್ತೆಯಾಗಿದೆ. ಹೃದಯ ಸಮಸ್ಯೆ ಕಾಣಿಸಿಕೊಳ್ಳದೇ ಇದ್ದರೂ ಪರೀಕ್ಷೆ ವೇಳೆ ಹೃದಯದಲ್ಲಿನ ರಂಧ್ರ ಪತ್ತೆಯಾಗಿದ್ದರಿಂದ ಮೊದಲು ಹೃದಯ ಶಸ್ತ್ರಚಿಕಿತ್ಸೆಗೆ ವೈದ್ಯರು ನಿರ್ಧರಿಸಿದ್ದರು. ಬಳಿಕ ಬೊಮ್ಮಾಯಿ ಅವರ ಕುಟುಂಬ ಸದಸ್ಯರ ಒಪ್ಪಿಗೆ ಪಡೆದ ವೈದ್ಯರು ಹೃದಯದ ಬೈಪಾಸ್ ಸರ್ಜರಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಆಸ್ಪತ್ರೆಯಿಂದ ಇನ್ನೂ ಹೆಲ್ತ್ ಬುಲೆಟಿನ್ ಬಿಡುಗಡೆಯಾಗಿಲ್ಲ.