ಬೆಳ್ತಂಗಡಿ : ಶಾಸಕ ಹರೀಶ್ ಪೂಂಜ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು..!

ಬೆಳ್ತಂಗಡಿ: ಕಳೆಂಜ ಗ್ರಾಮದ ಮೀಸಲು ಅರಣ್ಯ ಪ್ರದೇಶದ ಜಾಗದಲ್ಲಿ ವ್ಯಕ್ತಿಯೊಬ್ಬರು ಮನೆ ನಿರ್ಮಿಸುತ್ತಿರುವ ಸಂದರ್ಭ ಅರಣ್ಯ ಇಲಾಖೆಯ ಅಧಿಕಾರಿಗಳು ತಡೆ ಒಡ್ಡಿದಾಗ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಮಧ್ಯ ಪ್ರವೇಶಿಸಿ ಅರಣ್ಯಾಧಿಕಾರಿಯನ್ನು ಏಕವಚನದಲ್ಲಿ ಮತ್ತು ಅವಾಚ್ಯವಾಗಿ ನಿಂದಿಸಿದ್ದು ಈ ಬಗ್ಗೆ ಅರಣ್ಯಾಧಿಕಾರಿ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಅಮ್ಮಿನಡ್ಕದಲ್ಲಿ ಅರಣ್ಯ ಇಲಾಖೆಗೆ ಸೇರಿದ ಮೀಸಲು ಅರಣ್ಯ ಪ್ರದೇಶದ ಜಾಗದಲ್ಲಿ ಲೋಲಾಕ್ಷ ಎಂಬವರು ಅಕ್ರಮವಾಗಿ ಮನೆ ನಿರ್ಮಿಸಲು ಫೌಂಡೇಷನ್ ಹಾಕಿದ್ದು ಅದನ್ನು ಉಪ್ಪಿನಂಗಡಿ ಅರಣ್ಯ ಇಲಾಖೆ ಅಧಿಕಾರಿಗಳು ಅಕ್ಟೋಬರ್ 6 ರಂದು ಕಿತ್ತೆಸೆದಿದ್ದರು. ಈ ಬಗ್ಗೆ ಮಾಹಿತಿ ಪಡೆದ ಶಾಸಕ ಹರೀಶ್ ಪೂಂಜ ಸ್ಥಳಕ್ಕೆ ತೆರಳಿ ಸ್ಥಳೀಯರ ಸಹಕಾರದೊಂದಿಗೆ ತಾತ್ಕಾಲಿಕ ಶೆಡ್ ನಿರ್ಮಿಸಿ ಗೃಹಪ್ರವೇಶ ಮಾಡಿಹೋಗಿದ್ದರು. ಆದರೆ ಅಕ್ಟೋಬರ್ 9 ರಂದು ಮತ್ತೆ ಅರಣ್ಯಾ ಇಲಾಖೆಯ ಅಧಿಕಾರಿಗಳು ಮನೆ ತೆರವು ಮಾಡಲು ಮುಂದಾದಾಗ, ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಬಿಜೆಪಿ ಶಾಸಕರು ಹಾಗು ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ ಶಾಸಕ ಹರೀಶ್ ಪೂಂಜ ಮನೆ ತೆರವುಗೊಳಿಸದಂತೆ ತಡೆದಿದ್ದರು. ಈ ಸಂದರ್ಭದಲ್ಲಿ ಆಕ್ರೋಶಗೊಂಡ ಶಾಸಕ ಹರೀಶ್ ಪೂಂಜ ಉಪ್ಪಿನಂಗಡಿ ಅರಣ್ಯಾಧಿಕಾರಿ ಜಯಪ್ರಕಾಶ್ ಕೆಕೆ ಅವರನ್ನು ಉದ್ದೇಶಿಸಿ ಅಸಂಸದೀಯ ಪದವನ್ನು ಬಳಸಿ ನಿಂದಿಸಿದ್ದಾರೆ. ಈ ಬಗ್ಗೆ ಉಪ್ಪಿನಂಗಡಿ ಅರಣ್ಯಾಧಿಕಾರಿ ಜಯಪ್ರಕಾಶ್ ಕೆಕೆ ಧರ್ಮಸ್ಥಳ ಠಾಣೆಗೆ ದೂರು ನೀಡಿದ್ದು, ಪೊಲೀಸರು ಐಪಿಸಿ ಸೆಕ್ಷನ್ 143, 353, 504 149 ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

error: Content is protected !!