ಉಜಿರೆ: ಡಾ ಡಿ ವೀರೇಂದ್ರ ಹೆಗ್ಗಡೆಯವರ ವಿರುದ್ಧ ಅಪಪ್ರಚಾರ, ಅವಹೇಳನಕಾರಿ ಹೇಳಿಕೆ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದ ಅಪಚಾರವನ್ನು ಖಂಡಿಸಿ ಉಜಿರೆ ಶ್ರೀ ಜನಾರ್ಧನ ಸ್ವಾಮಿ ರಥಬೀದಿಯಲ್ಲಿ ಅಖಿಲ ಕರ್ನಾಟಕ ಶ್ರೀ ಮಂಜುನಾಥ ಸ್ವಾಮಿ ಭಕ್ತ ವೃಂದದಿಂದ ಆ.04ರಂದು ಸಮಾವೇಶ ನಡೆಯಿತು.
ಸಮಾವೇಶದಲ್ಲಿ ಸೇರಿದ ಭಕ್ತವೃಂದ ಅಪಪ್ರಚಾರ ಮಾಡಿದವರ ವಿರುದ್ಧ ಧಿಕ್ಕಾರ ಕೂಗಿ, ವೀರೇಂದ್ರ ಹೆಗ್ಗಡೆಯವರ ಜೊತೆ ನಾವಿದ್ದೇವೆ ಎಂದು ಒಕ್ಕೊರಳಲ್ಲಿ ಹೇಳಿದರು.
ಬಳಿಕ ಶ್ರೀ ಜನಾರ್ಧನ ಸ್ವಾಮಿ ರಥಬೀದಿಯಿಂದ ಉಜಿರೆ ಕಾಲೇಜು ರಸ್ತೆಯವರೆಗೆ ಬೃಹತ್ ಸಮಾವೇಶ ಜಾಥ ನಡೆದು ಹಕ್ಕೊತ್ತಾಯ ಮಂಡಿಸಲಾಯಿತು. ಈ ಸಮಾವೇಶದಲ್ಲಿ ಮಂಜುನಾಥ ಸ್ವಾಮಿ ಭಕ್ತವೃಂದದ ಉಭಯ ಜಿಲ್ಲೆಗಳ ಸಾರ್ವಜನಿಕರು ಊರ-ಪರವೂರ ಭಕ್ತರು ಭಾಗವಹಿಸಿದ್ದರು.
‘ಜಸ್ಟಿಸ್ ಫಾರ್ ಸೌಜನ್ಯಾ’ ಪೋಸ್ಟರ್ ಹಿಡಿದು ಬಂದ ತಾಯಿ ಕುಸುಮಾವತಿ
ಸಾವಿರಾರು ಮಂದಿಯಿಂದ ಹಕ್ಕೋತ್ತಾಯ ನಡೆಯುತ್ತಿದ್ದ ಸಂದರ್ಭದಲ್ಲಿ ಸೌಜನ್ಯ ತಾಯಿ ಆಗಮಿಸಿದ್ದು ಈ ವೇಳೆ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು.
ತುಂಬಿದ ಸಭೆಯ ಮಧ್ಯೆ ‘ಜಸ್ಟಿಸ್ ಫಾರ್ ಸೌಜನ್ಯಾ ಪೊಸ್ಟರ್’ ಹಿಡಿದು ಬಂದ ಸೌಜನ್ಯ ತಾಯಿ ಕುಸುಮಾವತಿ ಗೌಡ ‘ನಾನೂ ವೇದಿಕೆಗೆ ಹೋಗಬೇಕು ಎಂದು’ ಆಗ್ರಹಿಸಿದ್ದಾರೆ. ‘ನನ್ನ ಮಗಳಿಗೆ ನ್ಯಾಯ ಕೊಡಿ, ನಾವೂ ಧರ್ಮಸ್ಥಳದವರು, ಈ ಪ್ರಕರಣದಲ್ಲಿ ಕ್ಷೇತ್ರದ ಅವಹೇಳನ ಮಾಡಿಲ್ಲ. ಹೆಗ್ಗಡೆಯವರ ಅವಹೇಳನ ಮಾಡಿಲ್ಲ. ಮುಂದೆ ಇಂತಹ ಅತ್ಯಾಚಾರ ಧರ್ಮಸ್ಥಳದಲ್ಲಿ ನಡೆಯಬಾರದು ಕ್ಷೇತ್ರದ ಹೆಸರು ಹಾಳಾಗಬಾರದು ಎಂಬ ಉದ್ದೇಶ ನಮಗೂ ಇದೆ. ಮಗಳನ್ನು ಕಳೆದುಕೊಂಡ ತಾಯಿ ನಾನು, ಈ ಸಭೆಯಲ್ಲಿ ನನ್ನ ನೋವನ್ನು ಹೇಳಿಕೊಳ್ಳಬೇಕು’ ಎಂದಿದ್ದಾರೆ,