‘ಯುವ ಪೀಳಿಗೆ ದೇಶದ ಆಸ್ತಿಯಾಗಿ ಬೆಳೆಯಬೇಕು : ಆರೋಗ್ಯವಂತರಾಗಿರಲು ಆಹಾರ ಕ್ರಮ ಅನುಸರಿಸಬೇಕು: ಪ್ರಸನ್ನ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಕಿವಿಮಾತು

 

ಬೆಳ್ತಂಗಡಿ: ನಮ್ಮ ಆಹಾರ ಹವ್ಯಾಸಗಳಿಂದ ಅರ್ಧ ರೋಗಗಳು ಬರುತ್ತಿವೆ. ಹಾಗಾಗಿ ಎಲ್ಲರೂ ಆರೋಗ್ಯವಂತರಾಗಿರಲು ಆಹಾರ ಕ್ರಮವನ್ನು ಅನುಸರಿಸಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ, ಜಿಲ್ಲಾ ಉಸ್ತವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದ್ದಾರೆ.

ಜು.08ರಂದು ಲಾಯಿಲ ಪ್ರಸನ್ನ ಶಿಕ್ಷಣ ಸಂಸ್ಥೆಗೆ ಭೇಟಿ ನೀಡಿ ಸಂಸ್ಥೆಯ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಗಂಗಾಧರ ಗೌಡ ಅವರು ಸುಮಾರು 40 ವರ್ಷಗಳ ಹಿಂದೆ ರಾಜಕೀಯಕ್ಕೆ ಬಂದಿದ್ದರು. ಅವರು ಶಿಕ್ಷಣ ಸಂಸ್ಥೆ ಸ್ಥಾಪಿಸಿ ವಿದ್ಯಾದಾನ ಮಾಡುವ ಕೆಲಸ ಮಾಡುತ್ತಿದ್ದಾರೆ. ಇಂತಹಾ ಉತ್ತಮ ಸಂಸ್ಥೆಗೆ ಬಂದಾಗ ಸಿಕ್ಕ ಶಿಕ್ಷಣವನ್ನು ಸದುಪಯೋಗ ಪಡಿಸಿಕೊಂಡು ಉತ್ತಮ ಪ್ರಜೆಗಳಾಗಿ. ಯುವಕರೇ ದೇಶದ ಭವಿಷ್ಯ. ಯುವ ಪೀಳಿಗೆ ಸ್ವಂತ ಆಸ್ತಿಯಾಗಿ ಬೆಳೆಯಬೇಕು ಎಂಬುದು ಸರಕಾರದ ಆಶಯವಾಗಿದೆ. ನೀವು ಮಾಡುವ ಕೆಲಸದಲ್ಲಿ ಆಸಕ್ತಿ ವಹಿಸಿದರೆ ಯಶಸ್ಸು ನಿಶ್ಚಿತ ಎಂದು ವಿದ್ಯಾರ್ಥಿಗಳ ಬದುಕಿಗೆ ಭರವಸೆ ನೀಡಿದರು.

ಮಾಜಿ ಸಚಿವ, ಪ್ರಸನ್ನ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಕೆ.ಗಂಗಾಧರ ಗೌಡ ಮಾತನಾಡಿ, ದಿನೇಶ್ ಗುಂಡುರಾಯರ ಕಾಲದಲ್ಲಿ ಚುನಾವಣೆ ಪ್ರಚಾರಕ್ಕೆ ಬಂದಿದ್ದ ಇಂದಿರಾಗಾಂಧಿ ಮೇಲೆ ಆಗಂತುಕರು ಸಂಚು ಹೂಡಿದ್ದರು. ಆ ಸಂದರ್ಭದಲ್ಲಿ ಗುಂಡೂರಾಯರ ಮಾರ್ಗದರ್ಶನದಂತೆ ಅವರನ್ನು ಚಿಕ್ಕಮಗಳೂರಿಗೆ ಸುರಕ್ಷಿತವಾಗಿ ಕಳುಹಿಸಿದ್ದೆ’ ಅಂದು ಗುಂಡುರಾಯರು ಉಳುವವನೇ ಒಡೆಯನಾಗಿ ನಿಯಮ ಜಾರಿ ಮಾಡಿದ್ದರಿಂದ ಕೃಷಿಕರ ಮಕ್ಕಳು ಡಾಕ್ಟರ್, ಎಂಜಿನಿಯರ್ ಆಗಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶೈಲೇಶ್ ಕುಮಾರ್, ರಂಜನ್ ಜಿ.ಗೌಡ, ಜಿ.ಪಂ. ಮಾಜಿ ಸದಸ್ಯ ರಾಜಶೇಖರ ಅಜ್ರಿ, ಹಿರಿಯ ಮುಖಂಡ ಮೋಹನ್ ಶೆಟ್ಟಿಗಾರ್, ಬೆಳ್ತಂಗಡಿ ವಿ.ಸ.ಕ್ಷೇತ್ರದ ಉಸ್ತುವಾರಿ ಶಾಹಿದ್ ತೆಕ್ಕಿಲ್, ರಬ್ಬರ್ ಸೊಸೈಟಿ ಅಧ್ಯಕ್ಷ ಶ್ರೀಧರ್ ಜಿ.ಭಿಡೆ ಸಹಿತ ಇತರರು ಉಪಸ್ಥಿತರಿದ್ದರು.
ಬಾಲಕೃಷ್ಣ ಕೇರಿಮಾರು ಕಾರ್ಯಕ್ರಮ ನಿರ್ವಹಿಸಿದರು.

error: Content is protected !!