ಬಹುಜನ ನೇತಾರ ಪಿ. ಡೀಕಯ್ಯ ಅವರ ಅಮೃತ ಶಿಲಾ ಪ್ರತಿಮೆ ಅನಾವರಣ: ‘ಡೀಕಯ್ಯರವರ ಕೊಡುಗೆಗಳು ಶಾಶ್ವತ ಪ್ರೇರಣೆಯಾಗವಂತೆ ಮಾಡಲು ಅಗತ್ಯ ಕ್ರಮ’: ಶಾಸಕ ಹರೀಶ್ ಪೂಂಜ: ‘ನಾನು ಶಾಸಕಿಯಾಗುವಲ್ಲಿ ಡೀಕಯ್ಯರವರು ಕಾರಣರಾಗಿರಬಹುದು’: ಶಾಸಕಿ ಕು. ಭಾಗೀರಥಿ ಮುರುಳ್ಯ

ಬೆಳ್ತಂಗಡಿ : ಡೀಕಯ್ಯ ಅವರ ಪ್ರತಿಮೆ ಸ್ಥಾಪನೆಯಿಂದ ಅವರ ನೆನಪು ಮಾತ್ರವಲ್ಲ, ಅವರ ಹೋರಾಟಗಳು, ಆದರ್ಶಗಳು, ಚಿಂತನೆಗಳು ಶಾಶ್ವತವಾಗಿ ಉಳಿಯಲು ಮತ್ತು ಅವು ಇತರರಿಗೆ ಸದಾ ಪ್ರೇರಣೆಯಾಗಲು ಸಾಧ್ಯವಾಗಿದೆ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಹೇಳಿದ್ದಾರೆ.

ಅವರು ಜು.08ರಂದು ದಿ. ಪಿ ಡೀಕಯ್ಯ ಅವರ ಹುಟ್ಟೂರು ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮದ ಪೊಯ್ಯ ಸಂಗಮ್ ವಿಹಾರದ ಆವರಣದಲ್ಲಿ ಸ್ಥಾಪಿಸಲಾದ ಪಿ. ಡೀಕಯ್ಯ ಅವರ ಅಮೃತ ಶಿಲಾ ಪ್ರತಿಮೆ ಅನಾವರಣಗೊಳಿಸಿ ಮಾತನಾಡಿದರು.

ರಾಜ್ಯದ ಬಹುಜನ ಚಳುವಳಿಯ ಹಿರಿಯ ನೇತಾರ ದಿ. ಪಿ ಡೀಕಯ್ಯ ಅವರು ನಡೆಸಿದ ಹೋರಾಟಗಳು ಮತ್ತು ಅವರು ಸಮಾಜಕ್ಕೆ ನೀಡಿದ ಕೊಡುಗೆಗಳು ಶಾಶ್ವತವಾಗಿ ಇತರರಿಗೂ ಪ್ರೇರಣೆಯಾಗುವ ರೀತಿಯಲ್ಲಿ, ಅವರ ಕುಟುಂಬದರೊಂಂದಿಗೆ ಸಮಾಲೋಚಿಸಿ, ಬೆಳ್ತಂಗಡಿ ತಾಲೂಕಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದಾಗಿ ಹೇಳಿದ್ದಾರೆ.

ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿ ಕು. ಭಾಗೀರಥಿ ಮುರುಳ್ಯ ಅವರು ಬಹುಜನ ಚಳುವಳಿಯ ನೇತಾರ ಪಿ.ಡೀಕಯ್ಯರವರ ನೂತನ ಪ್ರತಿಮೆಗೆ ಮಾಲಾರ್ಪಣೆಗೈದು ಗೌರವ ಸಲ್ಲಿಸಿ ಬಳಿಕ ಪಿ.ಡೀಕಯ್ಯರವರ ಬದುಕು -ಹೋರಾಟಗಳ ಸಂಸ್ಮರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಸಮಾಜ ಅಂದ ಮೇಲೆ ಒಂದೇ ಸಮಾಜ ಬದುಕಲು ಸಾಧ್ಯವಿಲ್ಲ. ನಮ್ಮೆಲ್ಲರನ್ನೂ ಒಗ್ಗೂಡಿಸಿಕೊಂಡು ಬದುಕಬೇಕಾಗುತ್ತದೆ. ನಾನು ಇಂದು ಶಾಸಕಿಯಾಗಿ ಅವಕಾಶ ಸಿಗಬೇಕಾದರೆ ಬೇರೆ ಹಿರಿಯರ ಹೋರಾಟ, ಪರಿಶ್ರಮದ ಜೊತೆಗೆ ಡೀಕಯ್ಯರವರು ಕೂಡ ಕಾರಣರಾಗಿರಬಹುದು.

ಸುಳ್ಯದಲ್ಲಿ ಅನೇಕ ಹಿರಿಯರು ಅವಕಾಶ ಕೊಡಬೇಕೆಂದು ಹೋರಾಟಗಳನ್ನು ಮಾಡುತ್ತಾ ಬಂದಿದ್ದಾರೆ. ಎಲ್ಲರ ಪ್ರೀತಿ, ವಿಶ್ವಾಸಗಳನ್ನು ಗಳಿಸಿಕೊಂಡು ಡೀಕಯ್ಯರವರು ಕೂಡ ಆ ಕೆಲಸ ಮಾಡಿದ್ದಾರೆ. ಅವರು ಬಹಳಷ್ಟು, ಸಾಧನೆ, ಪರಿಶ್ರಮಪಟ್ಟಿದ್ದಾರೆ. ಡೀಕಯ್ಯರವರ ಸಾವಿನಲ್ಲಿ ಅನ್ಯಾಯ ಆಗಿದ್ದರೆ ತನಿಖೆ ವಿಚಾರದಲ್ಲಿ ಖಂಡಿತವಾಗಿ ಇಲ್ಲಿನ ಶಾಸಕರು ವಿಧಾನಸಭೆಯಲ್ಲಿ ಧ್ವನಿ ಎತ್ತಿದಾಗ ಅವರ ಜೊತೆ ನಾನು ಕೈಜೋಡಿಸುತ್ತೇನೆ. ಶಾಸಕರಿಗೆ ಧ್ವನಿಗೂಡಿಸುತ್ತೇನೆ ಎಂದರು.

ಆಶಯ ನುಡಿ ಹಾಗೂ ಪ್ರಸ್ತಾವನೆಗೈದ ರಾಜ್ಯ ಪ್ರಶಸ್ತಿ ಪುರಸ್ಕೃತ ಸಾಮಾಜಿಕ ಚಿಂತಕ ಲೋಲಾಕ್ಷ ಅವರು ಮಾತನಾಡುತ್ತಾ ಜಿಲ್ಲೆಯ ದಲಿತ ಸಂಘಟನೆಗಳು, ಸಮುದಾಯ ಸಂಘಟನೆಗಳು ಮತ್ತು ಪ್ರಗತಿಪರ ಸಂಘಟನೆಗಳು ಒಂದಾಗಿ ದಲಿತ ಚಳುವಳಿಯ ನೇತಾರ ಅಂಬೇಡ್ಕರ್ ವಾದಿ ಚಿಂತಕ ಪಿ.ಡೀಕಯ್ಯ ಅವರ ನಿಗೂಢ ಸಾವಿನ ಪ್ರಕರಣದ ಸತ್ಯಶೋಧನೆ ನಡೆಸಿ ಅಗತ್ಯ ಬಿದ್ದರೆ ಹೋರಾಡಿ ಸರಕಾರಕ್ಕೆ ಒತ್ತಡ ತಂದು ಕುಟುಂಬಕ್ಕೆ ನ್ಯಾಯ ಕೊಡಿಸಬೇಕು , ಆ ಮೂಲಕ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ತಲುಪಿಸಬೇಕು ಎಂದು ಕುಟುಂಬದ ಪರವಾಗಿ ಮನವಿ ಮಾಡಿಕೊಂಡರು.

ದ.ಕ.ಅಹಿಂದ ಚಳುವಳಿಯ ಅಧ್ಯಕ್ಷ ಪದ್ಮನಾಭ ನರಂಗಾನ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ . ಕರ್ನಾಟಕ ದಸಂಸ (ಪ್ರೊ.ಬಿ.ಕೆ.ಸ್ಥಾಪಿತ) ರಾಜ್ಯ ಸಂಘಟನಾ ಸಂಚಾಲಕ ಎಂ.ದೇವದಾಸ್, ಕರ್ನಾಟಕ ದ.ಸಂ.ಸ. ಜಿಲ್ಲಾ ಸಂಚಾಲಕ ರಘು ಎಕ್ಕಾರು, ನ್ಯಾಯವಾದಿ , ಸಿಪಿಎಂ ಹಿರಿಯ ಮುಖಂಡ ಶಿವಕುಮಾರ್, ಪತ್ರಕರ್ತ ಶಿಬಿ ಧರ್ಮಸ್ಥಳ, ಪ.ಜಾತಿ, ಪ.ವರ್ಗಗಳ ಅಧ್ಯಯನ ಮತ್ತು ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಮೋಹನಾಂಗಯ್ಯ ಸ್ವಾಮಿ, ಬಹುಜನ ಸಮಾಜ ಚಳುವಳಿ ರಾಜ್ಯ ಮುಖಂಡ ಕಾಂತಪ್ಪ ಆಲಂಗಾರ್, ಬಿ.ಎಸ್.ಪಿ. ಬೆಳ್ತಂಗಡಿ ತಾಲೂಕು ಅಧ್ಯಕ್ಷ ಶ್ರೀನಿವಾಸ್ ಪಿ.ಎಸ್. ಕರ್ನಾಟಕ ರಾಜ್ಯ ಆದಿ ದ್ರಾವಿಡ ಸಮಾಜ ಸೇವಾ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ಬಲ್ಲಾಳ್ ಬಾಗ್, ಮಾಜಿ ಜಿ.ಪಂ. ಸದಸ್ಯ ಶೇಖರ್ ಕುಕ್ಕೇಡಿ, ಸುಳ್ಯ ತಾ.ಪಂ. ಮಾಜಿ ಅಧ್ಯಕ್ಷ ಚನಿಯ ಕಲ್ತಡ್ಕ, ಪೌರ ಕಾರ್ಮಿಕರ ಸಂಘ ದ.ಕ. ಜಿಲ್ಲಾಧ್ಯಕ್ಷ ಅನಿಲ್ ಕುಮಾರ್, ಸಾಮಾಜಿಕ ಚಿಂತಕ ರಘು ಧರ್ಮಸೇನ್ ಬೆಳ್ತಂಗಡಿಯವರುಗಳು ಮಾತನಾಡಿ ನಾಡಿನಲ್ಲಿ ಮಹತ್ವದ ಅಂಬೇಡ್ಕರ್ ಚಿಂತನೆಯನ್ನು ಬಿತ್ತಿ ಹೋದ ಬಹುಜನ ಚಳುವಳಿಯ ನೇತಾರ ಪಿ.ಡೀಕಯ್ಯರವರ ಸಾವಿಗೆ ನ್ಯಾಯ ಕೊಡಿಸಲು ಶ್ರಮಿಸಬೇಕು ಎಂದು ಒಕ್ಕೊರಲ ಅಭಿಪ್ರಾಯಪಟ್ಟರು.

ಗ್ರಾ.ಪಂ.ಅಧ್ಯಕ್ಷೆ ಗಾಯತ್ರಿ ಗೋಪಾಲ ಗೌಡ, ಸಾಮಾಜಿಕ ಚಿಂತಕ ಎನ್. ಸಿ. ಸಂಜೀವ, ಗ್ರಾ.ಪಂ.ಮಾಜಿ ಅಧ್ಯಕ್ಷರಾದ ಸೀತಾರಾಮ ಮಡಿವಾಳ, ಮಹೇಶ್ ಕುಮಾರ್, ಸದಸ್ಯೆ ಸುಮತಿ ಶೆಟ್ಟಿ, ಖಲಂದರ್ ಷಾ ಜುಮ್ಮಾ ಮಸೀದಿ ಸ್ಥಾಪಕ ಜ.ಕಾಸಿಂ ಪದ್ಮುಂಜ ದಿ.ಪಿ.ಡೀಕಯ್ಯರವರ ಚಳುವಳಿಯ ಹಾದಿಯನ್ನು ನೆನಪಿಸಿಕೊಂಡರು.

ಈ ಸಂದರ್ಭದಲ್ಲಿ ಹಿರಿಯ ಮುಖಂಡರಾದ ಅಣ್ಣು ಸಾಧನ ಪೊಡಿಯ ಬಾಂಗೇರು, ರಾಘವ ಕಲ್ಮಂಜ, ಎ ಐ ಕೆ ಎಸ್ ತಾಲೂಕು ಸಮಿತಿ ಉಪಾಧ್ಯಕ್ಷ ಎಚ್ ನೀಲೇಶ್, ಮೋನಪ್ಪ ನೀರಾಡಿ ಹಾಗೂ ಪದ್ಮುಂಜ ಸ.ಹಿ.ಪ್ರಾ. ಶಾಲಾ ಮುಖ್ಯೋಪಧ್ಯಾಯಿನಿ ಗಿರಿಜಾ, ಬಹುಜನ ಸಮಾಜ ಚಳುವಳಿ ರಾಜ್ಯ ಮುಖಂಡ ಕಾಂತಪ್ಪ ಆಲಂಗಾರ್, ಬೆಳ್ತಂಗಡಿ ತಾಲೂಕು ಬಿ.ಎಸ್.ಪಿ. ಅಧ್ಯಕ್ಷ ಶ್ರೀನಿವಾಸ್ ಪಿ.ಎಸ್. ಪದ್ಮುಂಜ ಸಿ.ಎ.ಬ್ಯಾಂಕ್ ಅಧ್ಯಕ್ಷ ರಕ್ಷಿತ್ . ಪಣೆಕ್ಕರ ಉಪಸ್ಥಿತರಿದ್ದರು.

ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪ ನಿರ್ದೇಶಕ ಕೋದಂಡರಾಮಯ್ಯ ಸ್ವಾಗತಿಸಿ,
ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಉಪನ್ಯಾಸಕಿ ಡಾ.ಆಶಾಲತಾ ವಂದಿಸಿದರ. ಪತ್ರಕರ್ತ ಅಚುಶ್ರೀ ಬಾಂಗೇರು ಕಾರ್ಯಕ್ರಮ ನಿರೂಪಿಸಿದರು.

error: Content is protected !!