ಬೆಳ್ತಂಗಡಿ : ಪ.ರಾಮಕೃಷ್ಣ ಶಾಸ್ತ್ರಿಗಳ ಕುತೂಹಲವೇ ಬರಹಗಳ ಶಕ್ತಿಯಾಗಿದೆ. ಕುತೂಹಲ ಅವರಲ್ಲಿರುವ ಶ್ರೇಷ್ಠ ಸಂಪತ್ತು. ಕುತೂಹಲವೇ ವಿಷಯ ಸಂಗ್ರಹಿಸಲು ಪ್ರೇರಣೆಯಾಗಿದೆ. ಆಡು ಮುಟ್ಟದ ಸೊಪ್ಪಿಲ್ಲ ಎಂಬ ಮಾತಿನಂತೆ ಶಾಸ್ತ್ರಿಗಳ ಬರಹ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಹೇಳಿದರು.
ಅವರು ಜು.08ರಂದು ಬೆಳ್ತಂಗಡಿ ಶ್ರೀ ಮಂಜುನಾಥೇಶ್ವರ ಕಲಾ ಭವನದಲ್ಲಿ ಪ.ರಾಮಕೃಷ್ಣ ಶಾಸ್ತ್ರಿ ಅಭಿನಂದನಾ ಸಮಿತಿ ಬೆಳ್ತಂಗಡಿ ಇದರ ವತಿಯಿಂದ ನಡೆದ 70 ವರ್ಷ ತುಂಬಿದ ಸಾಹಿತಿ ಪ. ರಾಮಕೃಷ್ಣ ಶಾಸ್ತ್ರಿ ಗಳನ್ನು ಅಭಿನಂದಿಸಿ ಹಾಗೂ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.
ಪ.ರಾಮಕೃಷ್ಣ ಶಾಸ್ತ್ರಿಗಳಲ್ಲಿ ವಿಷಯಗಳನ್ನು ಆಳವಾಗಿ ಸಂಗ್ರಹಿಸಿ ಅದರ ಸವಿವರವನ್ನು ಸಂಕ್ಷಿಪ್ತವಾಗಿ ಕೊಡುವ ಭಾಷಾ ಪಾಂಡಿತ್ಯವಿದೆ’ ತಾವು ಅನುಭವಿಸಿ ಮೊತ್ತೊಬ್ಬರಿಗೆ ಕೊಡುವವರು ಅವರು. ಅವರ ಸಾಧನೆಗೆ ಶಕ್ತಿಯಾಗಿ ಗೌರವ ಸನ್ಮಾನ ದೊರೆತಿದೆ’ ಎಂದರು.
ಶಾಸಕ ಹರೀಶ್ ಪೂಂಜ ಮಾತನಾಡಿ, ‘ಪ.ರಾ.ಶಾಸ್ತ್ರಿಗಳ ಸಾಹಿತ್ಯ ಬದುಕು ರೂಪಿಸುವಂತಹುದು. ಪಠ್ಯ ಪುಸ್ತಕಗಳಲ್ಲಿ ಅವರ ಬರಹಗಳು ಇನ್ನಷ್ಟು ಬರುವಂತಾಗಬೇಕು. ಆ ನಿಟ್ಟಿನಲ್ಲಿ ಪ್ರಯತ್ನ ಮಾಡಲಿದ್ದು, ಅವರ ಬರಹಗಳ ಪ್ರೇರಣೆಯಿಂದ ಇನ್ನಷ್ಟು ಹುಟ್ಟಿ ಬರಲಿ’ ಎಂದರು.
ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನದ ಸಂಚಾಲಕ ಎನ್. ಅಶೋಕ್ ಭಟ್ ಉಜಿರೆ ಅಭಿನಂದನಾ ನುಡಿಗಳನ್ನಾಡಿ ‘ಪ.ರಾಮಕೃಷ್ಣ ಶಾಸ್ತ್ರಿಗಳ ಬರಹಗಳು ನೈಜ ಚಿತ್ರಣಗಳಾಗಿವೆ. ಅವರ ಬರಹ ಮತ್ತು ಬದುಕಿನಲ್ಲಿ ತಪಸ್ಸಿದೆ. ಸತ್ಯ- ಧರ್ಮ, ನ್ಯಾಯ – ನೀತಿಯೇ ಅವರ ಬದುಕಿನ ಧರ್ಮವಾಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿಶ್ರಾಂತ ಕುಲಪತಿ ಡಾ. ಚಿನ್ನಪ್ಪ ಗೌಡ ಅವರು ‘ಬರವಣಿಗೆ ಮೂಲಕ ಬದುಕು ಕಟ್ಟಿಕೊಂಡವರು ಪ.ರಾ.ಶಾಸ್ತ್ರಿಗಳು. ಅವರು ನೆಲದ ಸ್ಪರ್ಷವನ್ನು ಬದುಕಿನುದ್ದಕ್ಕೂ ಇಟ್ಟುಕೊಂಡವರು. ಮಾಹಿತಿಗಳನ್ನು ಬೇರೆ ಬೇರೆ ಆಕರಗಳಿಂದ ಸಂಗ್ರಹಿಸಿ ತನ್ನ ಜ್ಞಾನದಲ್ಲಿಸಿಕೊಂಡು ಲೇಖನವಾಗಿ ಬರೆಯುವುದು ಅವರಿಗೆ ಸಿದ್ದಿಸಿದೆ. ಶಿವರಾಮ ಕಾರಂತರ ಬರವಣಿಗೆ 1 ಲಕ್ಷ ಪುಟವಾದರೆ ಪ.ರಾ. ಶಾಸ್ತ್ರಿಗಳ ಬರವಣಿಗೆ 50 ಸಾವಿರ ಪುಟವನ್ನು ದಾಟಿದೆ. ಅವರ ಬರಹಗಳು ಬೇರೆ ಬೇರೆ ಭಾಷೆಗಳಿಗೆ ಅನುವಾದವಾಗಿರುವುದರಿಂದ ಶಾಸ್ತ್ರಿಗಳು ಕನ್ನಡ, ತುಳು, ಇಂಗ್ಲಿಷ್, ಮಲೆಯಾಳಂ ಹೀಗೆ ಬಹುಭಾಷಾ ಸಾಹಿತಿಯಾಗಿದ್ದಾರೆ’ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಪ.ರಾಮಕೃಷ್ಣ ಶಾಸ್ತ್ರಿಗಳು ಬರೆದ ಮಳೆ ಮಳೆ, ನಟನ ಮನೋಹರಿ, ರೋಚಕ ಲೋಕ, ಪ್ರಪಂಚದ ಸೋಜಗಗಳು, ಲಕ್ಷ್ಮೀ ಮಚ್ಚಿನ ಬರೆದ ಸಾಹಿತಿ ಪ. ರಾಮಕೃಷ್ಣ ಶಾಸ್ತ್ರಿ ಬದುಕು ಬರಹ ಬವಣೆ ಕೃತಿಗಳನ್ನು ಡಾ. ಡಿ.ವೀರೇಂದ್ರ ಹೆಗ್ಗಡೆಯವರು ಬಿಡುಗಡೆಗೊಳಿಸಿದರು. ಇದೇ ವೇಳೆ ಪ.ರಾಮಕೃಷ್ಣ ಶಾಸ್ತ್ರಿ ಅಭಿನಂದನಾ ಸಮಿತಿ ಬೆಳ್ತಂಗಡಿ, ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ಪ.ರಾಮಕೃಷ್ಣ ಶಾಸ್ತ್ರಿಗಳನ್ನು ಅಭಿನಂದಿಸಲಾಯಿತು.
ಮಧ್ಯಾಹ್ನ ಯಕ್ಷಗಾನ ಭಾಗವತಗಾನಕ್ಕೆ ಸೇಕ್ರೇಡ್ ಹಾರ್ಟ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಎನ್. ಎಂ. ಜೋಸೆಪ್ ಚಾಲನೆ ನೀಡಿದರು. ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ, ಗಾನಸುರಭಿ ರವಿಚಂದ್ರ ಕನ್ನಡಿಕಟ್ಟೆ, ಗಿರೀಶ್ ರೈ ಕಕ್ಕೆಪದವು ಭಾಗವತರಾಗಿದ್ದು, ಕೃಷ್ಣಪ್ರಕಾಶ ಉಳಿತ್ತಾಯ, ಶಿತಿಕಂಠ ಭಟ್ ಉಜಿರೆ ಹಿಮ್ಮೇಲದಲ್ಲಿ ಇದ್ದರು. ಬಿ.ಎನ್. ಗಿರೀಶ್ ಹೆಗ್ಡೆ ನಿರೂಪಿಸಿದರು.
ಪ.ರಾಮಕೃಷ್ಣ ಶಾಸ್ತ್ರಿಗಳ ಸಾಹಿತ್ಯ ಅವಲೋಕನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಸಾಪ ಜಿಲ್ಲಾಧ್ಯಕ್ಷ ಡಾ.ಎಂ.ಪಿ.ಶ್ರೀನಾಥ್ ವಹಿಸಿದ್ದರು. ಪತ್ರಿಕಾ ಲೇಖನದ ಕುರಿತು ಪತ್ರಕರ್ತ ನಿತ್ಯಾನಂದ ಪಡ್ರೆ, ಸಮಗ್ರ ಸಾಹಿತ್ಯದ ಕುರಿತು ಉಪನ್ಯಾಸಕ ಡಾ. ಕೃಷ್ಣಾನಂದ ಪಿ.ಎಂ, ಮಕ್ಕಳ ಸಾಹಿತ್ಯದ ಕುರಿತು ಸಾಹಿತಿ ದೀಪಾ ಫಡ್ಕೆ ಅವಲೋಕಿಸಿದರು. ಕಸಾಪ ತಾಲ್ಲೂಕು ಅಧ್ಯಕ್ಷ ಯದುಪತಿ ಗೌಡ ಸ್ವಾಗತಿಸಿ, ಶಿಕ್ಷಕ ಧರಣೇಂದ್ರ ಕುಮಾರ್ ನಿರೂಪಿಸಿದರು. ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ರಾಜೇಶ್ವರಿ ವಂದಿಸಿದರು.
ಸಭಾ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಪಾವಂಜೆ ಕ್ಷೇತ್ರದ ಆಡಳಿತ ಮೊಕ್ತೇಸರ ಶಶೀಂದ್ರ ಕುಮಾರ್, ಪ.ರಾಮಕೃಷ್ಣ ಶಾಸ್ತ್ರಿಗಳ ಪತ್ನಿ ಶಾರದಾ ಆರ್ ಶಾಸ್ತ್ರಿ ಉಪಸ್ಥಿತರಿದ್ದರು.
ಅಭಿನಂದನಾ ಸಮಿತಿ ಸಂಚಾಲಕ ಸಂಪತ್ ಬಿ.ಸುವರ್ಣ ಸ್ವಾಗತಿಸಿ, ವಿಭಾ ಕೃಷ್ಣ ಪ್ರಕಾಶ ಉಳಿತ್ತಾಯ ಸನ್ಮಾನ ಪತ್ರ ವಾಚಿಸಿದರು. ವಕೀಲ ಧನಂಜಯ ರಾವ್ ಕಾರ್ಯಕ್ರಮ ನಿರೂಪಿಸಿದರು.