ಬೆಳ್ತಂಗಡಿ : ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಸಂಬಂಧ ಜೂನ್ 27 ರಂದು ಪಡಂಗಡಿ ಗ್ರಾಮದ ಪೊಯ್ಯಗುಡ್ಡೆ ನಿವಾಸಿ ವೃತ್ತಿಯಲ್ಲಿ ಕಾರು ಚಾಲಕ ನೌಷದ್(30) ಎಂಬಾತನ ಮನೆ ಮೇಲೆ ಎನ್.ಐ.ಎ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಈ ದಾಳಿ ಸಂಬಂಧ ಎನ್.ಐ.ಎ ಅಧಿಕಾರಿಗಳು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ.
ದಾಳಿ ವೇಳೆ ನೌಷದ್ ಮನೆಯಲ್ಲಿರಲ್ಲಿಲ್ಲ. ಹೀಗಾಗಿ ನೌಷದ್ ಮನೆಯವರ ಕೈಗೆ ನೌಷದ್ ಖುದ್ದು ಬೆಂಗಳೂರು ಎನ್ಐಎ ಕಚೇರಿಗೆ ಬಂದು ತನಿಖೆಗೆ ಹಾಜರಾಗಲು ನೋಟಿಸ್ ನೀಡಿ ಹೋಗಿದ್ದರು. ನೌಷದ್ ಮನೆಮಂದಿ ಬಡಕುಟುಂಬದವರಾಗಿದ್ದು ವೃತ್ತಿಯಲ್ಲಿ ಕಾರು ಚಾಲಕನಾಗಿದ್ದಾನೆ. ಕಳೆದ ವರ್ಷ ವಿವಾಹವಾಗಿದ್ದ ಈತ ಕೆಲ ದಿನಗಳಿಂದ ಪ್ರವೀಣ್ ಹತ್ಯೆ ಸಂಬಂಧ ಮನೆಗೂ ಬಾರದೆ ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ.
ಕೊಡಗು ಜಿಲ್ಲೆಯ ಅಬ್ದುಲ್ ನಾಸಿರ್, ಅಬ್ದುಲ್ ರೆಹಮಾನ್ ಮನೆ ಮೇಲೆಯೂ ಜೂನ್ 27 ರಂದು ದಾಳಿ ಮಾಡಿ ಪರಿಶೀಲನೆ ನಡೆಸಿ ಕೆಲವು ದಾಖಲೆಗಳು ಹಾಗೂ ಎಲೆಕ್ಟ್ರಾನಿಕ್ ಸಾಧನಗಳನ್ನು ವಶಪಡಿಸಿಕೊಂಡಿದ್ದಾರೆ. ಮೂವರೂ ಆರೋಪಿಗಳು ಕರ್ನಾಟಕ ಮತ್ತು ತಮಿಳುನಾಡು ರಾಜ್ಯದ ವಿವಿಧ ಅಡಗುತಾಣಗಳಲ್ಲಿ ಪ್ರವೀಣ್ ನೆಟ್ಟಾರು ಅವರ ಹತ್ಯೆ ಮಾಡಿದ ಪ್ರಮುಖ ಹಂತಕರಿಗೆ ಆಶ್ರಯ ನೀಡಿದ್ದಾರೆ ಎಂದು ಶಂಕಿಸಲಾಗಿದೆ. ಈ ಪ್ರಕರಣದಲ್ಲಿ ಮೂವರ ಹೊರತಾಗಿ ಇನ್ನೂ ಐವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ.
ಉಮರ್ ಫಾರುಕ್, ಅಬುಬಕರ್ ಸಿದ್ದಿಕ್, ತುಫೈಲ್, ಮೊಹಮ್ಮದ್ ಮುಸ್ತಾಫಾ ಕೊಲೆ ಪ್ರಕರಣದಲ್ಲಿ ಎನ್.ಐ.ಎಗೆ ಬೇಕಾಗಿರುವ ಮೋಸ್ಟ್ ವಾಂಟೆಡ್ ಆರೋಪಿಗಳಾಗಿದ್ದು. ಕೊಡಗಿನ ತುಫೈಲ್ ಎಮ್.ಹೆಚ್ ಈ ನಾಲ್ಕು ಜನ ಆರೋಪಿಗಳಲ್ಲಿ ಪ್ರಮುಖ ಆರೋಪಿಯಾಗಿದ್ದಾನೆ. ಈ ಪೈಕಿ ತುಫೈಲ್, ಮೊಹಮ್ಮದ್ ಮುಸ್ತಾಫಾ ಸುಳಿವಿಗೆ ತಲಾ 5 ಲಕ್ಷ ರೂ ಬಹುಮಾನ ಹಾಗೂ ಉಮರ್ ಫಾರುಕ್, ಅಬುಬಕರ್ ಸಿದ್ದಿಕ್ ಪತ್ತೆಗೆ ತಲಾ 2 ಲಕ್ಷ ಬಹುಮಾನ ಘೋಷಣೆ ಮಾಡಲಾಗಿದೆ. ಈ ನಾಲ್ಕು ಜನ ಆರೋಪಿಗಳ ಪತ್ತೆಗೆ ಈಗಾಗಲೆ ಒಟ್ಟು 14 ಲಕ್ಷ ಬಹುಮಾನ ಘೋಷಣೆ ಮಾಡಲಾಗಿದೆ. ಈ ಎಲ್ಲಾ ಆರೋಪಿಗಳಿಗೆ ಶರಣಾಗತಿಯಾಗಲು ಜೂನ್ 30 ರಂದು ಡೆಡ್‌ಲೈನ್ ನೀಡಲಾಗಿದ್ದು .ಆರೋಪಿಗಳು ಎನ್.ಐ.ಎ ಕೋರ್ಟ್ಗೆ ಹಾಜರಾಗದೆ ಇದ್ದಲ್ಲಿ ಅವರ ಆಸ್ತಿ ಮುಟ್ಟುಗೋಲು ಹಾಕುವುದಾಗಿ ಎಚ್ಚರಿಕೆ ನೀಡಿದೆ.
ಹತ್ಯೆಯ ಉದ್ದೇಶ ಬಹಿರಂಗ: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಗ್ರಾಮದಲ್ಲಿ ಪಿಎಫ್ ಐ ‘ಕಿಲ್ಲರ್ ಸ್ಕ್ವಾಡ್ಸ್’ ಅಥವಾ ‘ಸೇವಾ ತಂಡಗಳು’ 2022 ರ ಜುಲೈ 26 ರಂದು ಪ್ರವೀಣ್ ನೆಟ್ಟಾರುವನ್ನು ಕಡಿದು ಹತ್ಯೆ ಮಾಡಿತ್ತು. 2047 ರ ವೇಳೆಗೆ ಭಾರತದಲ್ಲಿ ಇಸ್ಲಾಮಿಕ್ ಆಡಳಿತವನ್ನು ಸ್ಥಾಪಿಸುವ ತನ್ನ ಅಂತಿಮ ಉದ್ದೇಶದೊಂದಿಗೆ ಕೋಮುವಾದದ ಬೆನ್ನು ಹತ್ತುವ ಮತ್ತು ಕೋಮು ದ್ವೇಷವನ್ನು ಹರಡುವ ಗುರಿಯೊಂದಿಗೆ ಪಿಎಫ್‌ಐ ಇಂತಹ ಉದ್ದೇಶಿತ ‘ದ್ವೇಷದ ಹತ್ಯೆಗಳಲ್ಲಿ’ ತೊಡಗಿಸಿಕೊಂಡಿದ್ದರು ಎಂದು ಎನ್ ಐ ಎ ತನಿಖೆಯಲ್ಲಿ ಬೆಳಕಿಗೆ ಬಂದಿದೆ.