ಬೆಳ್ತಂಗಡಿ: ಸಮರ್ಪಕ ತ್ಯಾಜ್ಯ ನಿರ್ವಹಣೆಯಾಗದೆ ತಾಲೂಕಿನ ಅನೇಕ ನದಿಗಳು ತ್ಯಾಜ್ಯದಿಂದ ತುಂಬುತ್ತಿದೆ. ಈ ಸಾಲಿನಲ್ಲಿ ಈಗ ಕಪಿಲಾ ನದಿ ಕೂಡ ಸೇರಿಕೊಂಡಿದೆ.
ನಿತ್ಯ ಹರಿದ್ವರ್ಣ ಪ್ರದೇಶದಿಂದ ಹರಿಯುವ ಕಪಿಲಾ ನದಿ ಪ್ರಖ್ಯಾತ ಶಿಶಿಲೇಶ್ವರ ದೇವಾಲಯಲ್ಲಿ ಸಾವಿರಾರು ದೇವರ ಮೀನುಗಳಿಗೆ ಆಶ್ರಯ ನೀಡುತ್ತಿದೆ. ಆದರೇ ಇದೇ ನದಿ ನೀರಿಗೆ, ನದಿ ಸುತ್ತ-ಮುತ್ತ ದಿನನಿತ್ಯ ಕೋಳಿ ತ್ಯಾಜ್ಯವನ್ನು ಸುರಿಯುತ್ತಿರುವುದು ಬೆಳಕಿಗೆ ಬಂದಿದೆ.
ಇದೇ ನದಿ ನೀರಿನಿಂದ ದೇವರಿಗೆ ನಿತ್ಯ ಅಭಿಷೇಕ ನಡೆಯುತ್ತಿದೆ. ಸಾವಿರಾರು ಭಕ್ತರು ಈ ನೀರನ್ನು ತೀರ್ಥವೆಂದು ಕುಡಿಯುತ್ತಿದ್ದಾರೆ. ಈ ನೀರು ಕೃಷಿ ಹಾಗೂ ಕುಡಿಯಲು ನಿತ್ಯ ಬಳಸಲ್ಪಡುತ್ತಿದೆ. ಆದರೂ ಕಿಡಿಗೇಡಿಗಳು ಕೋಳಿ ತ್ಯಾಜ್ಯವನ್ನು ಇದೇ ನದಿಗೆ ಎಸೆಯುತ್ತಿದ್ದು , ಇದರಿಂದ ಸುತ್ತಲಿನ ಪ್ರದೇಶ ದುರ್ವಾಸನೆಯಿಂದ ಕೂಡಿದೆ.
ಕಿಡಿಗೇಡಿಗಳ ಕೃತ್ಯದಿಂದ ಆಕ್ರೋಶಗೊಂಡ ಸ್ಥಳೀಯರು, ಪರಿಸರ ಪ್ರೇಮಿಗಳು ಸಂಬಂಧಪಟ್ಟ ಅಧಿಕಾರಿಗಳು, ಗ್ರಾಮ ಪಂಚಾಯತ್ , ತಾಲೂಕು ಆಡಳಿತ ಕೂಡಲೆ ಮಧ್ಯ ಪ್ರವೇಶಿಸಿ ಸೂಕ್ತ ಕಾನೂನು ಕ್ರಮ ಜರಗಿಸುವಂತೆ ಒತ್ತಾಯಿಸಿದ್ದಾರೆ.