ಕಮ್ಯುನಲ್ ಪ್ರಕರಣ ಹತ್ತಿಕ್ಕಲು ಆ್ಯಂಟಿ ಕಮ್ಯೂನಲ್ ವಿಂಗ್ ರಚನೆ: ಕೋಮು ಪ್ರಕರಣದ ಆರೋಪಿಗಳ ಮೇಲೆ ಖಾಕಿ ಕಣ್ಣು : ದ್ವೇಷ ಭಾಷಣ, ನೈತಿಕ ಪೊಲೀಸ್ ಗಿರಿ, ದನಗಳ್ಳತನ ಪ್ರಕರಣಗಳ ಮೇಲೂ ನಿಗಾ.!

ಮಂಗಳೂರು: ರಾಜ್ಯ ಗೃಹಸಚಿವ ಡಾ.ಜಿ.ಪರಮೇಶ್ವರ್ ಅವರ ಸೂಚನೆಯಂತೆ ಮಂಗಳೂರಿನಲ್ಲಿ ಆ್ಯಂಟಿ ಕಮ್ಯೂನಲ್ ವಿಂಗ್ ನ್ನು ಎರಡು ದಿನಗಳ ಹಿಂದೆ ರಚಿಸಲಾಗಿದೆ. ಸಿಟಿ ಸ್ಪೆಷಲ್ ಬ್ರಾಂಚ್ ಇನ್ಸ್ ಪೆಕ್ಟರ್ ಶರೀಫ್ ಅವರ ನೇತೃತ್ವದಲ್ಲಿ ತಂಡ ರಚನೆಯಾಗಿದ್ದು ಸಿಎಸ್ ಬಿ ಇನ್ಸ್ ಪೆಕ್ಟರ್ ಅವರು ಸಿಸಿಬಿ ಎಸಿಪಿ ಪಿ ಎ ಹೆಗ್ಡೆ ಇದರ ಮೇಲುಸ್ತುವಾರಿ ನೋಡಿಕೊಳ್ಳಲಿದ್ದಾರೆ.

ಆ್ಯಂಟಿ ಕಮ್ಯೂನಲ್ ವಿಂಗ್ ಕಾರ್ಯವಿಧಾನ

ಆ್ಯಂಟಿ ಕಮ್ಯೂನಲ್ ವಿಂಗ್ ಎಲ್ಲಾ ರೀತಿಯ ಕೋಮು ಪ್ರಕರಣಗಳ ಬಗ್ಗೆ ನಿಗಾವಹಿಸಲಿದೆ. ಕೋಮು ಪ್ರಕರಣದ ಆರೋಪಿಗಳ ಮೇಲೆ ನಿಗಾ ವಹಿಸಲಿದ್ದು, ಅವರ ಕಾರ್ಯಾಚರಣೆ ಬಗ್ಗೆ ಗಮನಕೊಡಲಿದೆ. ಹಿಂದಿನ ಎಲ್ಲಾ ಪ್ರಕರಣಗಳ ಸಂಬಂಧ ನ್ಯಾಯಾಲಯದ ವಿಚಾರಣೆಗಳ ಬಗ್ಗೆ ನಿಗಾವಹಿಸಲಿದ್ದು, ಸಂತ್ರಸ್ತರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಲಿದೆ. ಕಳೆದ 10 ವರ್ಷಗಳಿಂದ ನಡೆದ ಸುಮಾರು 200 ಪ್ರಕರಣಗಳ ಬಗ್ಗೆ ಈ ತಂಡ ನಿಗಾವಹಿಸಲಿದೆ. ಕೋಮು ದ್ವೇಷ ಮೂಡುವಂತಹ ಯಾವುದೇ ವಿಚಾರಕ್ಕೆ ಸಂಬಂಧಿಸಿದಂತೆ ದ್ವೇಷ ಭಾಷಣ, ನೈತಿಕ ಪೊಲೀಸ್ ಗಿರಿ, ಸಾಮಾಜಿಕ ಜಾಲತಾಣದಲ್ಲಿ ದ್ವೇಷ ಹರಡುವುದು, ದನಗಳ್ಳತನ ಪ್ರಕರಣದ ಬಗ್ಗೆ ಈ ತಂಡ ನಿಗಾವಹಿಸಲಿದೆ. ಯಾವುದೇ ಘಟನೆ ನಡೆದಾಗ ಆಯಾ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿ ಆ ಬಳಿಕ ಆ್ಯಂಟಿ ಕಮ್ಯೂನಲ್ ವಿಂಗ್ ಕ್ರಮ ಕೈಗೊಳ್ಳಲಿದೆ.

 

ಮಂಗಳೂರು ನಗರ ಪೊಲೀಸ್ ಕಮೀಷನರ್ ಕುಲದೀಪ್ ಕುಮಾರ್ ಆರ್ ಜೈನ್ ಆದೇಶ

ಮಂಗಳೂರು ನಗರದ ವಿಶೇಷ ಘಟಕದ (ಸಿ.ಎಸ್.ಬಿ) ಪೊಲೀಸ್ ನಿರೀಕ್ಷಕರು ಹಾಗೂ ಸಿಬ್ಬಂದಿಗಳು ಆ್ಯಂಟಿ ಕಮ್ಯೂನಲ್ ವಿಂಗ್ ನ ಸದಸ್ಯರಾಗಿರುತ್ತಾರೆ. ಅವರುಗಳು ನಗರದಲ್ಲಿ ದಾಖಲಾಗಿರುವ ಹಾಗೂ ದಾಖಲಾಗುವ ಎಲ್ಲಾ ಕೋಮು ಸೌಹಾರ್ದಕ್ಕೆ ದಕ್ಕೆ ಉಂಟು ಮಾಡುವ ಪ್ರಕರಣಗಳ ಕುರಿತು ಕಾಲಕಾಲಕ್ಕೆ ಆರೋಪಿಗಳ ಮೇಲೆ ನಿಗಾ ಇಡುವ ಕ್ರಮಗಳನ್ನು ಕೈಗೊಳ್ಳುವುದು. ನಗರದ ಅಪರಾಧ ವಿಭಾಗದ (ಸಿಸಿಐ) ಸಹಾಯಕ ಪೊಲೀಸ್ ಆಯುಕ್ತರು ಈ ತಂಡದ ಉಸ್ತುವಾರಿಯನ್ನು ವಹಿಸಿ ನಗರ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಕೋಮು ಗಲಭೆಗಳು ನಡೆಯದಂತೆ ಹಾಗೂ ಕೋಮು ಸೌಹಾರ್ದಕ್ಕೆ ತೊಂದರೆಯಾಗಬಹುದಾದ ವಿಚಾರಗಳ ಕುರಿತು ಕ್ರಮಗಳನ್ನು ಕೈಗೊಂಡು ಈ ಬಗ್ಗೆ ಮುಂಚಿತವಾಗಿ ಮಾಹಿತಿಯನ್ನು ಪಡೆದುಕೊಂಡು ಸಮಸ್ಯೆ ಬಂದಾಗ, ಕ್ಷಿಪ್ತ ಕಾರ್ಯಾಚರಣೆಯನ್ನು ನಡೆಸಿ `ಪರಿಸ್ಥಿತಿಯನ್ನು ನಿರ್ವಹಣೆ ಮಾಡಿ ನಿಭಾಯಿಸುವ ಕ್ರಮಗಳನ್ನು ಕೈಗೊಳ್ಳಬೇಕು.

error: Content is protected !!