ಹಸುಗೂಸು ಸಹಿತ ಇಬ್ಬರು ಮಕ್ಕಳನ್ನು ಬಿಟ್ಟು ನಾಪತ್ತೆಯಾದ ದಂಪತಿಗಳು: ಹೆತ್ತವರ ಪತ್ತೆಗಾಗಿ ಪೊಲೀಸರಿಗೆ ದೂರು: ಬೆಳ್ತಂಗಡಿಯ ಕರಾಯದಲ್ಲಿ ನಡೆದ ಘಟನೆ,ಮಕ್ಕಳು ಆಶ್ರಮಕ್ಕೆ:

 

 

 

 

ಬೆಳ್ತಂಗಡಿ: ಮನೆಯೊಂದರಲ್ಲಿ ತಮ್ಮ ಒಂದು ತಿಂಗಳ ಹಸುಗೂಸು ಸಹಿತ ಇಬ್ಬರು ಮಕ್ಕಳನ್ನು ಬಿಟ್ಟು ದಂಪತಿ ನಾಪತ್ತೆಯಾದ ಘಟನೆ ಬೆಳ್ತಂಗಡಿ ತಾಲೂಕಿನ ಕರಾಯ ಎಂಬಲ್ಲಿ ನಡೆದಿದೆ.
ಬೆಳ್ತಂಗಡಿ ತಾಲೂಕಿನ ಕರಾಯ ಎಂಬಲ್ಲಿ ಅಲೆಮಾರಿ ಜನಾಂಗದವರು ಎನ್ನಲಾದ ದಂಪತಿಗಳು ಬುಟ್ಟಿ ಹೆಣೆಯುವ ಕಾಯಕ ಮಾಡುತ್ತಾ, ಸ್ಥಳೀಯರ  ವಿಶ್ವಾಸ ಗಳಿಸಿದ್ದರು. ಮದ್ಯಪಾನ ವ್ಯಸನಿಗಳಾದ ಇವರು ಅಲ್ಲಲ್ಲಿ ಮಲಗಿಕೊಂಡು ಅವ್ಯವಸ್ಥಿತವಾಗಿ ಜೀವನ ನಡೆಸುತ್ತಿದ್ದರು. ಈ ದಂಪತಿಗಳಿಗೆ‌ 4 ವರ್ಷ ಪ್ರಾಯದ  ದಿನೇಶ ಎಂಬ  ಮಗನಿದ್ದು, ಒಂದು ತಿಂಗಳ ಹಿಂದೆಯಷ್ಟೇ ಹೆಣ್ಣು ಮಗುವೊಂದು ಜನಿಸಿತ್ತು.ಜೂ. 2ರಂದು ಈ ಇಬ್ಬರೂ ಮಕ್ಕಳನ್ನು ಕರಾಯ ಗ್ರಾಮದ ಮನೆಯೊಂದರಲ್ಲಿ ಬಿಟ್ಟು ನಾವು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಹೋಗಿ ಬರುತ್ತೇವೆ ಎಂದು ಹೇಳಿ ಈ ದಂಪತಿ ತೆರಳಿದ್ದಾರೆ. ಮಾನವೀಯತೆಯ ದೃಷ್ಟಿಯಿಂದ ಆ ಮನೆಯೊಡತಿ ಫಾತಿಮಾ ಅವರು ಇದಕ್ಕೆ ಒಪ್ಪಿಕೊಂಡಿದ್ದರು. ಆದರೆ, ಆ ಬಳಿಕ ಈ ದಂಪತಿಗಳ ಪತ್ತೆಯಿರಲಿಲ್ಲ. ಒಂದು ತಿಂಗಳ ಹಸುಗೂಸು ಸಹಿತ ಇಬ್ಬರು ಮಕ್ಕಳ ಲಾಲನೆ ಪಾಲನೆಯನ್ನು ಫಾತಿಮಾ ಮಾಡಿದ್ದಾರೆ. ಆದರೆ 2 ದಿನ ಕಳೆದರೂ ಹೆತ್ತವರು ಕಾಣಿಸಿಕೊಳ್ಳದೇ ಹೋದಾಗ ಕಳವಳಗೊಂಡ ಫಾತಿಮಾ, ಈ ವಿಷಯವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಪ್ರಸ್ತುತ ಈ ಮಕ್ಕಳನ್ನು ಪುತ್ತೂರಿನಲ್ಲಿರುವ ರಾಮಕೃಷ್ಣ ಆಶ್ರಮಕ್ಕೆ ಒಪ್ಪಿಸಲಾಗಿದೆ.

ಇದೀಗ ಮಕ್ಕಳನ್ನು ಬಿಟ್ಟು ಹೋಗಿ ನಾಲ್ಕು ದಿನಗಳು ಕಳೆದಿದೆ. ಹೆತ್ತವರ ಪತ್ತೆ ಇಲ್ಲದಿರುವುದನ್ನು ಗಮನಿಸಿದ ಫಾತಿಮಾ ಮೇ 05 ಸೋಮವಾರ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿ  ದಂಪತಿಯನ್ನು ಪತ್ತೆ ಹಚ್ಚುವಂತೆ ತಾವು ನೀಡಿದ ದೂರಿನಲ್ಲಿ ವಿನಂತಿಸಿದ್ದಾರೆ. ದಂಪತಿಯ ಪೈಕಿ ಗಂಡನ ಹೆಸರು ತಿಳಿದಿಲ್ಲ ಎಂದಿರುವ ಅವರು, ಪತ್ನಿಯ ಹೆಸರು ಆಕೆಯ ಮಗ ತಿಳಿಸಿದ ರೀತಿಯಲ್ಲಿ ಲೀಲಾ ಎಂಬುದಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

error: Content is protected !!