
ಬೆಳ್ತಂಗಡಿ: ಇತ್ತೀಚೆಗೆ ಖಾಸಗಿ ವಾಹಿನಿಯ ವತಿಯಿಂದ ಕರಾವಳಿ ಹಾಗೂ ಮಧ್ಯ ಕರ್ನಾಟಕ ವಿಭಾಗದಲ್ಲಿ ನೀಡಲಾದ “ಉತ್ತಮ ಶಾಸಕ” ಪ್ರಶಸ್ತಿಗೆ ಭಾಜನರಾದ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಹರೀಶ್ ಪೂಂಜ ಅವರನ್ನು ಶಿಶಿಲ ಸೀಮಾ ಚಿತ್ಪಾವನ ಸಂಘ ಹಾಗೂ ಬಿಜೆಪಿ ಗ್ರಾಮ ಸಮಿತಿ ಅರಸಿನಮಕ್ಕಿ ವತಿಯಿಂದ ಗೌರವಿಸಲಾಯಿತು.
ಶಾಸಕರ ನಿವಾಸ ಮಿಥಿಲ ದಲ್ಲಿ ಸಂಘ ಹಾಗೂ ಗ್ರಾಮ ಸಮಿತಿಯ ಪ್ರಮುಖರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಶಾಸಕರನ್ನು ಆತ್ಮೀಯವಾಗಿ ಅಭಿನಂದಿಸಿದರು. ಕ್ಷೇತ್ರದ ಅಭಿವೃದ್ಧಿ ಕಾರ್ಯಗಳು, ಜನಪರ ಯೋಜನೆಗಳು ಹಾಗೂ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಗಮನ ಸೆಳೆದಿರುವ ಹರೀಶ್ ಪೂಂಜ ಅವರಿಗೆ ದೊರೆತ ಈ ಪ್ರಶಸ್ತಿ ಬೆಳ್ತಂಗಡಿ ಕ್ಷೇತ್ರದ ಜನತೆಗೆ ಹೆಮ್ಮೆಯ ವಿಚಾರವಾಗಿದೆ ಎಂದು ಅಭಿನಂದನಾಕಾರರು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಹಾಗೂ ಗ್ರಾಮ ಸಮಿತಿಯ ಪ್ರಮುಖರು, ಶಾಸಕರಾಗಿ ಹರೀಶ್ ಪೂಂಜ ಅವರು ಕ್ಷೇತ್ರದ ವಿವಿಧ ಭಾಗಗಳ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಿದ್ದು, ಗ್ರಾಮೀಣ ಪ್ರದೇಶಗಳ ಮೂಲಭೂತ ಸೌಕರ್ಯಗಳ ಅಭಿವೃದ್ಧಿ, ರಸ್ತೆ, ಕುಡಿಯುವ ನೀರು, ಶಿಕ್ಷಣ, ಆರೋಗ್ಯ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಕೈಗೊಂಡಿರುವ ಕಾರ್ಯಗಳು ಗಮನಾರ್ಹವಾಗಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜನರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಜನಪ್ರತಿನಿಧಿಯಾಗಿ ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುತ್ತಿರುವುದಕ್ಕೆ “ಉತ್ತಮ ಶಾಸಕ” ಪ್ರಶಸ್ತಿ ಮತ್ತೊಂದು ಗೌರವದ ಗರಿಯಾಗಿದ್ದು, ಮುಂದಿನ ದಿನಗಳಲ್ಲಿಯೂ ಇನ್ನಷ್ಟು ಜನಪರ ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವಂತಾಗಲಿ ಎಂದು ಶುಭ ಹಾರೈಸಲಾಯಿತು.
ಗೌರವ ಸ್ವೀಕರಿಸಿದ ಶಾಸಕ ಹರೀಶ್ ಪೂಂಜ ಅವರು ಸಂಘ ಹಾಗೂ ಗ್ರಾಮ ಸಮಿತಿಯ ಆತ್ಮೀಯ ಅಭಿನಂದನೆಗೆ ಕೃತಜ್ಞತೆ ಸಲ್ಲಿಸಿದರು. ಪ್ರಶಸ್ತಿ ತಮ್ಮ ವೈಯಕ್ತಿಕ ಸಾಧನೆಗಿಂತಲೂ ಕ್ಷೇತ್ರದ ಜನತೆ ನೀಡಿದ ಸಹಕಾರ, ಪ್ರೀತಿ ಮತ್ತು ವಿಶ್ವಾಸಕ್ಕೆ ಸಂದ ಗೌರವವಾಗಿದೆ ಎಂದು ತಿಳಿಸಿದರು. ಜನರ ಆಶಯಗಳಿಗೆ ಸ್ಪಂದಿಸುತ್ತಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವುದಾಗಿ ಅವರು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಶಿಶಿಲ ಸೀಮಾ ಚಿತ್ಪಾವನ ಸಂಘದ ಪದಾಧಿಕಾರಿಗಳು, ಬಿಜೆಪಿ ಗ್ರಾಮ ಸಮಿತಿ ಅರಸಿನಮಕ್ಕಿಯ ಪ್ರಮುಖರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದರು.